Friday, August 25, 2017

ನಮ್ಮ ಗಣಪ ಗೌರಿಯರು ಮಣ್ಣಿಂದಲೆ ಬಂದು ಮಣ್ಣಲ್ಲೇ ಬೆರೆತು

ಅವತ್ತು ಸಂಜೆಯಾಗುವಂತಿಲ್ಲ, ನಮ್ಮೂರ ಚಿಲ್ಟರಿ ಪಿಲ್ಟಾರಿಗಳ ದಂಡು ಕೆರೆ ಏರಿ ಮೇಲೆ ಜಮಾಯಿಸುತ್ತಿತ್ತು. ಆಚೆ ಕಡೆ ಕೇರಿಯಿಂದ, ಒಂದೊಂದೇ ತಾವರೆ ಮುಡಿದ ತುರುಬುಗಳೂ, ಚೆಂಬು, ಗಂಟೆ ಸದ್ದು ಊದುಬತ್ತಿಯ ಹೊಗೆಯೂ ಕೆರೆ ಕಡೆಗೆ ಬರಲು ಶುರುವಾಗುತ್ತಿತ್ತು. ಅಲ್ಲಿ ಅದೇ ಕೆಳಗಿದ್ದ ಕಲ್ಲ ಮೇಲೆ ತಂದ ಪೂಜಾಸಾಮಾಗ್ರಿಗಳನ್ನಿಟ್ಟು ಸುಂದರಿಯರು ಗಂಗವ್ವನಿಗೆ ನಮಿಸುತ್ತಿದ್ದರು ಹೂವು ದೀಪ ತೇಲಿಬಿಟ್ಟು ತಂದ ಚೆಂಬಿನ ತುಂಬಾ ನೀರು ತುಂಬಿ ಸಿಂಬೆಸುತ್ತಿದ ತಲೆಯ ಮೇಲಿಟ್ಟು ಸಾಲಾಗಿ ನಡೆಯತೊಡಗಿದರೆ, ನನಗೋ ಆಗಷ್ಟೇ ನೋಡಿದ ಸಿನೆಮಾದ ಹಾಡುಗಳು ನೆನಪಾಗುತ್ತಿದ್ದವು. ಆಮೇಲಿನ ಸಂಭ್ರಮ ನೋಡಬೇಕು, ನಮ್ಮನೆ ಕೆಲಸಕ್ಕೆ ಬರುತ್ತಿದ್ದ ಹನುಮಿ ಮೈಲಿ ಶಾಂತಿ ಶಣ್ಣಿ ಮಂಜುಳೆಯರು ಮಧ್ಯಾಹ್ನಕ್ಕೆಲ್ಲ "ಅಮ್ಮಾ ಗೌರಿ ಕೂರ್ಸೇವಿ ಕುಂಕುಮಕ್ಕೆ ಬಾಗ್ನಕ್ಕೆ ಜನ ಬತ್ತಾರೆ, ನಾಳೆ ಬಂದ್ ಮಾಡ್ಕೊಡ್ತೇವಿ ಉಳಿದ್ ಕೆಲ್ಸ ಆತಾ" ಅಂತ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ತಾವರೆ ಹೂವಿನ ಕಿರೀಟ ಮುಗಿಲೆತ್ತರಕ್ಕೆತ್ತಿ ನಡೆದುಬಿಡುತ್ತಿದ್ದರು, ಸಂಜೆಗೆ ನಾವ್ಗಳು ಅವರ ಮನೆಗೆ ಹೋದರೆ ಸಾಕು, ಮಾಡಿದ ಕಜ್ಜಾಯ ಕರ್ಜಿಕಾಯಿ ಎಲ್ಲ ಕೈತುಂಬ ಕೊಟ್ಟು,"ಕೂಸೇ ತೋರ್ಸ್‌ಬ್ಯಾಡ ಮುಚ್ಚೀಟ್‌ಕಂಡು ತಿನ್" ಅಂತ ಕಟ್ಟಪ್ಪಣೆ ಹೊರಿಸಿ ಕಳಿಸುತ್ತಿದ್ದರು.
ಇತ್ತ ನಮ್ಮನೆಯಲ್ಲಿ ಬಾಳೆ ಕಂಬವೂಕಾಯುತ್ತಿತ್ತು ನಮ್ಮ ಹಾದಿ. ಮನೆಯ ಇಷ್ಟೆತ್ತರದ ಬಾಗಿಲಿಗೆ ತೋರಣ ಕಟ್ಟುವ ಸಡಗರ, ಅಕ್ಕನಿಗೆ ನನಗೆ ಅಮ್ಮ ಮಾಡಿದ ಚಕ್ಕುಲಿ ಹಿಟ್ಟನ್ನು ನಾದಿ ಚಕ್ಕುಲಿ ಒರಳಿನಲ್ಲಿ ತುಂಬಿ ಒತ್ತಿ ಸುತ್ತುವ ಕೆಲಸಾಮ್ಮ ಅದನ್ನ ಕೆಂಪಗೆ ಹದಾ ಕರಿದು ಎಣ್ಣೆ ಎಲ್ಲ ತೆಗೆದು, ಚಕ್ಕುಲಿಯನ್ನ ದೊಡ್ಡದೊಂದು ಡಬ್ಬಿಗೆ ತುಂಬಿಡುತ್ತಿದ್ದರು. ಮಲಗುವ ಮುನ್ನ ಮಂಟಪದ ವ್ಯವಸ್ಥೆ ನೋಡುವುದು ಅಪ್ಪ ತಮ್ಮನ ಸರದಿ, ನನಗೆ ಅಕ್ಕನಿಗೆ ನಾವಿಬ್ಬರೂ ಸೇರಿ ಮಾಡಿದ(ನನ್ನಕ್ಕ ತುಂಬಾ ಚೊಕ್ಕ ಕೆಲಸಗಳಲ್ಲಿ) ಹತ್ತಿಯ . ಹಾರ ಮುಗಿಸುವ ಕೆಲಸ, ಹೂ ಬತ್ತಿ ದೀಪದ ಬತ್ತಿ ಮಾಡಿ ಮತ್ತು ಗೆಜ್ಜೆ ವಸ್ತ್ರಕ್ಕೆ ಅರಿಸಿನ ಕುಂಕುಮ ಹಚ್ಚಿ ತೆಗೆದಿಡುತ್ತಿದ್ದೆವು, ಜತೆಗೆ ಬಗೆಬಗೆಯ ಆರತಿ ತಟ್ಟೆಗಳನ್ನು ಸಜ್ಜು ಮಾಡಿಟ್ಟು ಮಲಗುತ್ತಿದ್ದೆವು.

ಬೆಳಗ್ಗೆದ್ದು ಅಂಗಳವನ್ನ ಸಗಣಿಯಲ್ಲಿ ಬಳಿದು, ಚಂದ ಚಂದದ ರಂಗೋಲಿ ಹಾಕಿ ಒಳಬಂದರೆ ಅಮ್ಮ ಮಾಡುತ್ತಿರುವ ಪಂಚಕಜ್ಜಾಯದ ಘಮ ಹೊಸಿಲು ದಾಟಿ ಹೊರಹೋಗಲು ಹವಣಿಸುತ್ತಿತ್ತು ಇಡ್ಲಿ ಚಟ್ನಿ, ಕಾಯಿಕಡುಬು, ಮೋದಕ, ಉಂಡೆಪಾಯಸ ಕೋಸಂಬರಿ ಅಂಬೊಡೆಯ ಘಮ ಮನೆಯ ತುಂಬಾ ವ್ಯಾಪಿಸಿ ಹೊಟ್ಟೆಯೊಳಗೆ ಹಸಿವಿರದಿದ್ದರು ಹಸಿವು ಹುಟ್ಟುತ್ತಿತ್ತು, ಬಹುಶಃ ಇಂಥ ಕರ್ಮಠ ಬೆಳಗ್ಗೆಗೇ ಅಂತಾನೆ ಬ್ರಾಹ್ಮಣರ ಮನೆಗಳಲ್ಲಿ ಒಂದು ತಿಂಡಿ ಇರುತ್ತೆ, ಅದು ಅರಳು, ಅದಕ್ಕೆ ಮೊಸರು ಬೆಲ್ಲ ಹಾಕಿ ತಿಂದರೆ ಮುಗಿಯಿತು ಮತ್ತೆ ಪೂಜೆ ಮುಗಿವವರೆಗೂ ಹೊಟ್ಟೆ ಗಟ್ಟಿ, ಆದರೆ ಈ ಭಾಗ್ಯ ಮಕ್ಕಳಿಗೆ ಮಾತ್ರ, ಪೂಜೆ ಮುಗಿವ ತನಕ ಅಪ್ಪ ಅಮ್ಮ ಇಬ್ಬರು ಕಾಪಿ ಅಂಬ ಕಷಾಯದ ಬಲದ ಮೇಲೆಯೇ ಇರಬೇಕಾಗುತ್ತಿತ್ತುನಮ್ಮನೆಯ ಗಣಪ ಬೆಳ್ಳಿಯ ಗಣಪ, ಸಣ್ಣವ, ನಾವು ಬೆಳಗ್ಗೆಯೇ ಎದ್ದು ಕೊಯಿದ ದುರ್ವೆಯಲ್ಲಿ ಮುಳುಗಿಬಿಡುವ, ಒಬ್ಬೊಬ್ಬರು ೧೦೮ ದೂರ್ವೆ ಕೊಯ್ಯಲೆ ಬೇಕಾದ್ದು ನಿಯಮ, ಸ್ನಾನ ಆಗದೆ ಅಡಿಗೆ ಮನೆ ಮತ್ತು ದೇವರ ಮನೆಗೆ ಪ್ರವೇಶವೇ ಇಲ್ಲ. ಸ್ನಾನವಾಯಿತೋ ಅಪ್ಪನ ಪೂಜೆಗೆ ಕೈ ಕೆಲಸಕ್ಕೆ ಹತ್ತಿರ ಒಬ್ಬರು ಇರಲೇ ಬೇಕಿತ್ತು, ಅದರ ಭಾಗ್ಯ ತಮ್ಮನಿಗೆ ಅಥವಾ ನನಗೆ, ಅಪ್ಪನ ನ್ಯಾಸಾದಿಗಳ ನಂತರ ಶಾಸ್ತ್ರೋಕ್ತವಾಗಿ ಗಣಪತಿಯನ್ನ ಅರ್ಘ್ಯಪಾದಾದಿಗಲಿನ್ದ ಸತ್ಕರಿಸಿ ಅವನನ್ನು ಸ್ನಾನಕ್ಕೆ ಕರೆದು ಸ್ನಾನ ಮಾಡಿಸಿ ವಸ್ತ್ರಗಳನ್ನು ಅರ್ಪಿಸಿ ಪಂಚಲೋಹದ ಹರಿವಾಣದಲ್ಲಿ ಅಕ್ಕಿ ಕಡಲೆ ಕಾಯಿಯನ್ನಿಟ್ಟು ಪೀಠದಲ್ಲಿ ಕುಳ್ಳಿರಿಸಿ ಗ ಕಾರ ಗಣಪತಿ ಸಹಸ್ರನಾಮ ಓದಲು ಆರಂಭಿಸುತ್ತಿದ್ದರು, ಅಪ್ಪ ಇದೆಲ್ಲ ಮಾಡುತ್ತಿದ್ದುದು ಬಹಳ ಸಾವಕಾಶವಾಗಿ , ಅಲ್ಲೊಂದು ಪ್ರೀತಿಸುವ ಜೀವವಿದೆ ಅದಕ್ಕೆ ಇದೆಲ್ಲ ಮಾಡುತ್ತಿರುವುದು ಎನ್ನುವ ಅತೀವ ಆತ್ಮೀಯ ಭಾವದಲ್ಲಿ, ಸಹಸ್ರನಾಮದ ಹೊತ್ತಿಗೆಲ್ಲ ಅಮ್ಮನ ನೈವೇದ್ಯದ ತಯಾರಿ ಮುಗಿದು.ಎಲ್ಲ ಭಕ್ಷ್ಯಗಳು ಬಾಳೆ ಎಲೆಯಲ್ಲಿ ಮುಚ್ಚಿಕೊಂಡು ನಿಧಾನವಾಗಿ ದೇವರಮನೆಗೆ ಬಂದು ಸ್ಥಾಪಿತವಾಗುತ್ತಿದ್ದವು. ಅಪ್ಪ ಧೂಪಾರತಿಯ ನಂತರ ನೈವೇಧ್ಯವನ್ನು ಸ್ವೀಕರಿಸಲು ವಿನಂತಿಸಿ ಗೋಗ್ರಾಸಕ್ಕೂ ಅಲ್ಲಿಯೇ ಹಾಕುತ್ತಿದ್ದರು, ನೈವೇದ್ಯದ ನಂತರ ಮಹಾ ಮಂಗಳಾರತಿ, ನಮಸ್ಕಾರ,ತೀರ್ಥ ಪ್ರಸಾದ ಸ್ವೀಕಾರಣೆ. ನಮ್ಮ ಗಣಪ, ಪುರೋಹಿತರಿಗೆ ದಾನ ರೂಪದಲ್ಲಿ ಕೊಡಲ್ಪಡುವವನು, ಹಾಗಾಗಿ ಪ್ರಾಣ ಪ್ರತಿಷ್ಟೆಯಾದ ದಿನವೇ ಉದ್ವಾಸನೆಯೂ ಆಗಬೇಕಿತ್ತು, ಅದೇನಿದ್ದರೂ ಸಂಜೆಗೆ, ಮಂಗಳಾರತಿಯ ನಂತರ ಹಬ್ಬ ಮುಗಿಯುವ ಬದಲು ಇನ್ನಷ್ಟು ರಂಗೇರುತ್ತಿತ್ತು.

ಊಟ ಮಾಡಿ ಸುಧಾರಿಸಿ ಹೊಸಾ ಬಟ್ಟೆ ತೊಟ್ಟು ಇಪ್ಪತ್ತೊಂದು ಗಣಪತಿಯನ್ನು ದರ್ಶನ ಮಾಡಿ ಬರುವ ಕೆಲಸ, ಇದಕ್ಕೆ ಬೇಗನೆ ಹೊರಡುತ್ತಿದ್ದೆವು. ಸಂಜೆಗತ್ತಲೊಳಗೆ ಮನೆಗೆ ವಾಪಾಸು ತಲುಪಬೇಕಿತ್ತು, ಚಂದ್ರ ಭಯಕ್ಕೆ ಹೆಜ್ಜೆಗಳು ತಡವರಿಸುತ್ತಿದ್ದವು, ಹಾಗೂ ನಾನು ತಲೆಯೆತ್ತಿ ನೋಡಿ, ನನಗೆ ಚಂದ್ರ ಕಂಡರೆ ಬೇರೆಲ್ಲರಿಗೂ ಮಂಗ ಮಾಡಿ ತೋರಿಸಿ ನಾನೊಬ್ಬಳೇ ಅಪಮಾನಕ್ಕೊಳಗಾಗುವ ಭೀತಿಯಿಂದ ತಪ್ಪಿಸಿಕೊಳ್ಳುತ್ತಿದ್ದೆ! ಪಟಾಕಿಯ ಗರ್ನಾಲಿನ ಸದ್ದು ನನ್ನ ಬಾಲ್ಯಕ್ಕಿರಲಿಲ್ಲ, ಹಾಗೆಯೇ ಡಿಜೆ ಕುಣಿತ ಸಂಗೀತವು ನಮಗೆ ಗೊತ್ತಿರಲಿಲ್ಲ, ನಮ್ಮ ಗಣಪ ಗೌರಿಯರು ಮಣ್ಣಿಂದಲೆ ಬಂದು ಮಣ್ಣಲ್ಲೇ ಬೆರೆತು ಹೋಗುತ್ತಿದ್ದರು. ಗಣಪ ಮಾತ್ರ ಮನಸು ಮೈಯೊಳಗೆಲ್ಲ ಆವರಿಸಿ, ಮತ್ತೆ ಮತ್ತೆ ಅವನು ಬರುವ ದಿನಕ್ಕೆ ಎದುರು ನೋಡುವಂತೆ ಮಾಡುತ್ತಿದ್ದ. ನನ್ನ ಬಾಲ್ಯದಲ್ಲಿ ಬಹುಶಃ ಈಗಿನ ಜಾತಿಬೇಧಗಳು ಇರಲಿಲ್ಲ, ಮೂರನೆಯ ದಿನ ಗೌರಿ ಕಳಿಸುವ ದಿನ,ಆವತ್ತು ಕೆರೆದಂಡೆಯಲ್ಲಿ ಜಾತ್ರೆ ನೆರೆಯುತ್ತಿತ್ತು, ಆ ನಸುಗತ್ತಲು ಹೂವು ಸಂಭ್ರಮ ಕಳಿಸಿದ ನಂತರ ನಮ್ಮೂರಿನ ತುಂಬಾ ಅವರಿಸುತ್ತಿದ್ದ ಆ ಮೌನ, ಥೇಟು ಗಂಡನ ಮನೆಗೆ ಮಗಳನ್ನ ಕಳಿಸಿದ ತವರಿನದ್ದೆ ಚಿತ್ರಿಕೆ. ಹಬ್ಬಗಳೆಂದರೆ ನನ್ನ ಬಾಲ್ಯದ ಹಬ್ಬಗಳು ಚಿತ್ರಿಸಿದ ನೆನಪಿನ ಮೆರವಣಿಗೆ, ಮುಗ್ಧತೆಯಲ್ಲೇ ನಂಬಿಕೆಯೂ ಶ್ರದ್ಧೆಯು ಮೇಳೈಸಿದ್ದ ಆ ಕಾಲ ಇವತ್ತಿಗೂ ನನ್ನ ಮಗುವಾಗಲು ಪ್ರೇರೇಪಿಸುತ್ತದೆ, ಮಾಧ್ಯಮಗಳು ನಿರ್ಮಿಸಿದ ಕಂದರಗಳ ನಡುವೆಯೂ ಮನುಷ್ಯ ಮನುಷ್ಯರ ನಡುವೆ ಬೆಸೆವ ಆತ್ಮೀಯತೆಯ ಸೇತುವೆಯಾಗಿ ಈ ಹಬ್ಬಗಳು ನನಗೆ ಗೋಚರಿಸುತ್ತವೆ!

Tuesday, August 22, 2017

ಅಪ್ಪ ಹೇಳಿದ ನಿಯಮಗಳು

ಇದು ಈಗ ಕಲಿಕೆಯ ಸಮಯ ಅತಿಯಾಗಿ ಜಾತಕ ಫಲವನ್ನು ನಂಬದ ನಾನು ಅಪ್ಪ ಹೇಳಿದ್ದೆಲ್ಲ ನಿಜವಾಗುವಾಗ ಬಾಯಿಯ ಮೇಲೆ ಬೆರಳಿಟ್ಟಿದ್ದೇನೆ, ಅಪ್ಪನಿಗೆ ವಯಸ್ಸಾಯಿತು, ಈಗೀಗ ಪುಸ್ತಕ ಓದಲು ಕೂಡ ಅವರಿಗೆ ತೊಂದರೆ ಆಗುತ್ತಿದೆ, ಆದರೆ ಅವರ ಬುದ್ಧಿ ಮಾತ್ರ ಚುರುಕಾಗಿಯೇ ಇದೆ,  ಬರಿ ಹೆಸರಿಗೆ ಕೃಷ್ಣಮೂರ್ತಿಯಲ್ಲ,ನನ್ನ ತಂದೆ ಅಕ್ಷರಶಃ ಆ ಕೃಷ್ಣನ ಜೀವನದಲ್ಲಿ ಬಂದಷ್ಟೇ ಕಷ್ಟಗಳ  ಸರಮಾಲೆಯನ್ನು ದಿಟ್ಟವಾಗಿ ಎದುರಿಸಿದವರು, ತತ್ವಶಾಸ್ತ್ರ ಮತ್ತು ಬೃಹತ್ ಜಾತಖಾಕ್ಯ , ಭರ್ತೃಹರಿ ಕಾಳಿದಾಸ ಎಲ್ಲರನ್ನ ಓದಿಕೊಂಡವರು, ಸತತ ಮುವ್ವತ್ತು ವರ್ಷಗಳಿಂದ ಬಿಡದೆ ವಿಷ್ಣು ಸಹಸ್ರನಾಮ ಪಾರಾಯಣವನ್ನು ಚಾಚು ತಪ್ಪದೆ ನಡೆಸಿಕೊಂಡು ಬರುತ್ತಿರುವವರು. ಒಂದು ತೂಕದಲ್ಲಿ ಸಮತೋಲದಲ್ಲಿ ಬದುಕನ್ನ ಅದು ತಂದೊಡ್ಡುವ ಸವಾಲುಗಳನ್ನ ಎದುರಿಸಿ ಮನಸ್ಸಿನ ಶಾಂತಿಯನ್ನ ಕಾದಿಟ್ಟವರು, ಈ ಇಳಿ  ವಯಸ್ಸಿನಲ್ಲೂ ಅವರು  ಕಾಯಿ ಸುಲಿ ಯುತ್ತಾರೆ, ಕೆಲವೊಮ್ಮೆ ಅನಿವಾರ್ಯವಾಗಿ ಬರುವ ಮನೆಯ ದೈಹಿಕ ಶ್ರಮಗಳನ್ನು ದೇಹದ ನೋವುಗಳನ್ನು ಲೆಕ್ಕಿಸದೆ  ಹೊರುತ್ತಾರೆ, ಇಂತಹ ಪ್ಪನನ್ನ ಪಡೆದ ನನ್ನ ಪುಣ್ಯ ದೊಡ್ಡದು, ಬಹುಶಃ ಅಮ್ಮ  ನನ್ನಮ್ಮನು ಅಷ್ಟೇ, ಅಪ್ಪ ಮುಖಪುಟವಾದರೆ ಅಮ್ಮ ಒಳಗಿನ ತಿಳಿಹೂರಣ, ಅಪ್ಪನ ಬದುಕಿನ  ಸಾರವೆಲ್ಲ ಅಮ್ಮನ ಚುರುಕುತನದಲ್ಲಿದೆ ಅಪ್ಪ ಮಿತಭಾಷಿ. ಎಂಬತ್ತರ ಹತ್ತಿರದಲ್ಲಿರುವ ಆಪ್ಪಾ ನನಗೆ ದೇವರಿಗಿಂತ ಮೊದಲು ನೆನಪಾಗುವ ನನ್ನ ದೇವರು. 
ಮೊನ್ನೆ ಮನೆಯ ಯಾವ್ಯಾವುದೋ ಸಮಸ್ಯೆಗಳ ಸಲುವಾಗಿ ಕರೆ ಮಾಡಿದ್ದೆ, ಆಗ ಮಾತಾಡಿದ ಅವರು ನನ್ನ ಜಾತಕವನ್ನು ಪರಿಶೀಲಿಸಿ, ನನ್ನವನದನ್ನು ಪರಿಶೀಲಿಸಿ, ಅದರ ಫಲಗಳನ್ನು ಅದು ತಂದೊಡ್ಡಬಹುದಾದ ಅಪಾಯ ಮತ್ತು ಮಾನಸಿಕ ಸಂಕಷ್ಟಗಳನ್ನು ಹೇಳುತ್ತಾ, ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು, ಆಶ್ಚರ್ಯಕರವಾಗಿ ಅವರು ಹೇಳಿದ ಎಲ್ಲ ಉತ್ತರಗಳು ನನ್ನ ಸಧ್ಯದ ಪರಿಸ್ಥಿತಿಗಳನ್ನು ಕರಾರುವಕ್ಕಾಗಿ ತಿಳಿಸಿದ್ದವು. ಅಪ್ಪನ ಹತ್ತಿರ ನಾನು ಯಾವಾಗಲೂ ವಾದಿಸುತ್ತೇನೆ, ಇದೆಲ್ಲ ಹೇಗೆ ಸಾಧ್ಯ ಎಂದು, ಆದರೆ ಅಪ್ಪ ಇದನ್ನು ಒಂದು ಗೆಸ್  ಗೇಂ ಅನ್ನೋದನ್ನ ಒಪ್ಪೋದಿಲ್ಲ, ಅದು ಬಹಳ ಕರಾರುವಾಕ್ಕು ಮತ್ತು  ವಿಜ್ಞಾನ  ಅನ್ನುತ್ತಾರೆ, ಅದಕ್ಕಿಂತಲೂ ಮೀರಿದ್ದು ಕೂಡ ಮತ್ತೊಂದಿದೆ, ಅದು ನಮ್ಮ ಆತ್ಮವಿಶ್ವಾಸ ಮತ್ತು ಕಷ್ಟ ಸಹಿಷ್ಣುತೆ ಅಂತನ್ನುತ್ತಾರೆ, ಅವರು ಹೇಳಿದ ಯಾವ ವಿಷಯವು ಕೂಡ ನನ್ನ ಪಾಲಿಗೆ ಸುಳ್ಳಾಗಿಲ್ಲ, 
ಮೊನ್ನೆ ಅವರು ಹೇಳಿದ ಮಾತುಗಳು ನನ್ನ ಯಾವತ್ತಿಗೂ ಎಚ್ಚರಿಸುತ್ತಿರುತ್ತವೆ, ಇದನ್ನ ನಿಮ್ಮ ಜತೆ ಹಂಚಿಕೊಳ್ಳುವೆ 
೧) ಕಷ್ಟಗಳು ನೋವುಗಳು ಆಪಮಾನಗಳನ್ನು ಎದುರಿಸದ ಯಾವ ಜೀವವು ಜಗತ್ತಿನಲ್ಲಿಲ್ಲ, ಹಾಗಾಗಿ ನಾವು ನಮ್ಮ ಪಾಲಿಗೆ ಕಷ್ಟಗಳು ಬಂದಾಗ ಮನಸ್ಸು ಗಟ್ಟಿ ಮಾಡಿ ಸುಮ್ಮನಾಗಬೇಕು, ಕೆಲವಕ್ಕೆ ಸಮಯ ಕೂಡಿಬಂದಾಗಲೇ ಪರಿಹಾರ ಸಿಗುವುದು, ಅಲ್ಲಿಯತನಕ ಸತತ ಜೇಡನಂತೆ ಪರಿಶ್ರಮಿಸುತ್ತಿರಬೇಕು 
೨) ದೇವರು ಎಂದರೆ ಒಂದು ನಂಬಿಕೆ, ಅದು ಶ್ರದ್ಧೆ, ವಿಗ್ರಹ ರೂಪದಲ್ಲಿರುವ ದೇವರಿಗಿಂತ ನಮ್ಮ ಆತ್ಮಸಾಕ್ಷಿಯೇ ಮಿಗಿಲು ದೇವರು. 
೩) ಇನ್ನೊಬ್ಬರನ್ನು ನೋಯಿಸುವುದು ಸುಲಭ, ಆದರೆ ಅವೇ ನೋವುಗಳು ನಮಗೆ ಕಂತುಗಳಲ್ಲಿ ಹಿಂದಿರುಗುತ್ತದೆ, ಇದರ ಲೆಕ್ಕದ ಪಟ್ಟಿ ಯಾವ ಚಿತ್ರಗುಪ್ತನ ಕೈಯಲ್ಲೂ ಇಲ್ಲ, ಮಾಡಿದ ಪಾಪವನ್ನು ತೊಳೆಯಲು ಯಾವ ದೇವರು ನೆರವಾಗಲಾರ, ಹಾಗಾಗಿ ನೋಯಿಸುವ ಮೊದಲು, ಪಾಪಕ್ಕೆ ಮೊದಲು ವಿವೇಕವನ್ನು ಜಾಗೃತ ಇಡಬೇಕು. 
೪) ನಾವು ಬಯಸಿದ್ದೆಲ್ಲ, ಅಥವಾ ನಮ್ಮದು ಅಂತ ಅಂದುಕೊಂಡದ್ದೆಲ್ಲ ನಮ್ಮದಾಗಿರಲೇ ಬೇಕು ಅಂತಿಲ್ಲ, ಕೆಲವೊಮ್ಮೆ ನಮಗೆ ಅದು ದಕ್ಕಲಿಲ್ಲ ಅಂದರೆ ಅದಕ್ಕಿಂತ ಉನ್ನತವಾದದ್ದು, ಅದಕ್ಕಿಂತ ಬಹಳ ಯೋಗ್ಯವಾದದ್ದು ಬೇರೇನೋ ನಮ್ಮ ಪಾಲಿಗಿದೆ ಅನ್ನುವ ಸರಳ ವಿಷ್ಯ ಅರ್ಥ ಮಾಡಿಕೊಳ್ಳಬೇಕು, ಹರಿವ ನೀರಿನಂಥ ಜೀವನವನ್ನ ಕೊಳಕು ಮಾಡಿಕೊಳ್ಳಬಾರದು. 
೫) ನಡೆದು ಹೋದದ್ದನ್ನು ಮರೆಯಬೇಕು, ಉಪಕಾರ ಮಾಡಿದವರನ್ನು ನೆನೆಯಬೇಕು, ಮತ್ತು ಮರೆಯದೆ ಹಣಕಾಸಿನ ಸಹಾಯವನ್ನು ಹಿಂದಿರುಗಿಸಲು ಬೇಕು  ಅದು  ಪುರಂದರದಾಸರು ಹೇಳಿದಂತೆ ಕೆಟ್ಟದ್ದು ಮಾಡುವುದು, ಋಣ ಸಂಚಯವು ಮನುಷ್ಯನನ್ನು ಜನ್ಮಾಂತರಗಳ ಕಾಲ ಬಂಧಿಸುತ್ತದೆ, "ದುಗ್ಗಾಣಿ ಬಲು ಕೆಟ್ಟದಣ್ಣ " ಮರೆಯಬಾರದು. 
೬)ನನಗೇ ಯಾಕೆ ಕಷ್ಟ ಅಂತ ಕೇಳಲೇ ಬಾರದು, ಅದು ಇದ್ದರೇನೇ ಬದುಕು ಬೆಲೆ ಬರುವುದು. 
೭) ಇಂತಹ ಸಮಯದಲ್ಲೂ ಮೋಹಕ್ಕೆ ಬಲಿ  ಬೀಳಬಾರದು, ಇಷ್ಟಪಟ್ಟ ದೇಹ ಯೌವನ ಹಣ ಯಾವುದನ್ನು ನಾವು ಜತೆಗೆ ಕೊಂಡೊಯ್ಯಲಾಗದು ಇದ್ದಷ್ಟು ಕಾಲವು ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಅನ್ನುವುದನ್ನ  ಮರೆಯಬಾರದು. 
೮) ಸತ್ಯ ಬಹಳ ಕಹಿಯಾದ ಔಷಧ ಅದನ್ನು ಕುಡಿಯದಿದ್ದರೆ ರೋಗ ವಾಸಿಯಾಗುವುದಿಲ್ಲ. ಸತ್ಯ ಒಂದಲ್ಲ ಒಂದು ದಿನ ಹೊರ ಬರಲೇ ಬೇಕು ಹಾಗಾಗಿ ಸುಳ್ಳಿನ ಸಾಂಗತ್ಯ ಮಾಡಬಾರದು 
೯) ಕೆಟ್ಟ ಸಮಯವೂ, ಕೆಟ್ಟ ಸ್ನೇಹಿತರನ್ನು ಮಾನಸಿಕವಾಗಿ ತುಂಬಾ ಕೆಳಮಟ್ಟದ ವ್ಯಕ್ತಿಗಳನ್ನು ಜೀವಕ್ಕೆ ಹತ್ತಿರ ತಂದು ವ್ಯವಹರಿಸುತ್ತದೆ, ಅಲ್ಲಿ ಆ ದಿನಗಳನ್ನು ಉಪಾಯವಾಗಿ ದಾಟಬೇಕು, ಅವರ ಸಾಂಗತ್ಯಕ್ಕೆ ಸ್ನೇಹಕ್ಕೆ ಸಿಕ್ಕಿಕೊಳ್ಳಬಾರದು. 
ಕೊನೆಯದಾಗಿ ನನಗೆ ಹೇಳಿದ್ದು "ವಸ್ತುಗಳನ್ನು ಕೊಳ್ಳಬೇಡಿ ನೆನಪುಗಳನ್ನು ಕೊಳ್ಳಿ "
ನನ್ನಪ್ಪನಿಗೆ ನನ್ನ ಸಾಷ್ಟಾಂಗ ವಂದನೆಗಳು, ನಾನು ಅವರ ಕಿರು ಬೆರಳ ತುದಿಗೂ ಸಮನಲ್ಲ ಆದರೆ ನನ್ನ ಪ್ರಯಾಣ ಈಗ ಶುರುವಾಗಿದೆ, ಹಾಗೆಯೇ ಪ್ರಯಾಣದಲ್ಲಿ ಕೆಲವು ಬಿಟ್ಟು ಹೋಗಲೇ ಬೇಕಾದ ತಾಣಗಳನ್ನು ಮತ್ತೊಮ್ಮೆ ಸಂದರ್ಶಿಸಿ ಬರುತ್ತಿದ್ದೇನೆ, ಮುನಿಸಿಕೊಂಡ ಸ್ನೇಹಿತೆ,ಸ್ನೇಹಿತರು , ತಪ್ಪು ತಿಳುವಳಿಕೆಯಲ್ಲಿ ದೂರಾದ  ಆಪ್ತರು, ಮತ್ತು ನನ್ನ ಕೆಲವೇ ಗತ ಪ್ರೇಮದ ನೆನಪುಗಳನ್ನು ಹಾಗೆಯೇ ಅಲ್ಲಿಯೇ ಇದ್ದಂತೆ ಬಿಟ್ಟುಹೋಗಲು ಸಂದರ್ಶಿಸುತ್ತಿದ್ದೇನೆ, ಇನ್ನು ಬಹುಶಃ  ಹಿಮ್ಮುಖವಾದ ನಡಿಗೆ ಸಾಧ್ಯವಾಗಲಾರದು, ಹಾಗಾಗಿ ಅಳಬೇಕಾದಾಗಲೆಲ್ಲ ಅತ್ತು, ಎಲ್ಲೆಲ್ಲಿ ಅವರು ತಮ್ಮ ಲೋಕದಲ್ಲಿ ಆನಂದವಾಗಿ ಇರುವುದನ್ನ ನೋಡಿ ಸಂತಸ ಪಟ್ಟು, ಮುಂದುವರೆಯುತ್ತಿದ್ದೇನೆ, ಬಹುಶಃ ಇದರಿಂದ ಅರ್ಥವಾದದ್ದು ಒಂದೇ, ನಾನು ಅಂತರಂಗದಲ್ಲಿ ಬಹಳ ಸುಖಿ, ನನ್ನ ಅಪ್ಪನ ಮಾರ್ಗದರ್ಶನ ಗುರುವಿನ ಕರುಣೆ ನನ್ನ ಸಮತೋಲನದತ್ತ ನಿಜವಾಗಲೂ ಕೊಂಡೊಯ್ಯುತ್ತಿದೆ. ಮತ್ತು ಅಪ್ಪನ ಹರಕೆಯೊಂದು ಫಲಿಸಲಿ, ನನ್ನ ಬದುಕು ನಿಜವಾದ ಅರ್ಥದಲ್ಲಿ ಸಾರ್ಥಕವಾಗಲಿ. ಅಷ್ಟೇ ನನ್ನ ಆಶಯ, ಬಹುಶಃ ನನ್ನಪ್ಪನದೂ  ಕೂಡ . ಜಾತಕ ಫಲವನ್ನು ನೀವು ನಂಬುವಿರೋ ಬಿಡುವಿರೋ ಅಪ್ಪ ಹೇಳಿದ ನಿಯಮಗಳಂತೂ ಇಂದಿಗೂ ಸತ್ಯ  ಅಲ್ಲವಾ?




ಅದೆಷ್ಟೋ ಹೊತ್ತು, ಕತ್ತಲಲ್ಲಿ ಹೀಗೆಯೇ  ಕೂತಿದ್ದೆ. ಭಯವೊಂದು ಆವರಿಸಿ ಮೈ ತುಂಬಾ ಅಲ್ಲಾಡಲು ಆಗದ ನಿಶ್ಯಕ್ತಿ , ಮುದ್ದಾಡಿ ತಬ್ಬ ಬೇಕಿದ್ದ ದೇಹವೊಂದು ತಣ್ಣಗಾಗಿ ಕೊರಡಾಗಿ ಪಕ್ಕದಲ್ಲಿದೆ ಯಾರಿಗೆ ಹೇಳುವುದು, ತಾಳಿಗೆ ತಲೆ ಕೊಟ್ಟು ಏನನ್ನು ಹಂಚಿಕೊಳ್ಳದ ಅವಳಿಗೆ ಈ ವಿಷಯ ಗೊತ್ತಾದರೆ  ಬದುಕು ಬೀದಿಗೆ ಬೀಳುವುದು , ಹೊಟ್ಟೆ ಪಾಡಿಗೆಂದು ಹಿಡಿದಿದ್ದ ಕೆಲಸ ಕೈತಪ್ಪುವುದು ಹೇಗೆ ಪಾರಾಗಲಿ? ಗೊತ್ತಿಲ್ಲದೇ ಕಣ್ಣಿಂದ ನೀರು ಸುರಿಯಲಾರಂಭಿಸಿತು ಕತ್ತಲಲ್ಲೇ ತಡಕಾಡಿ ನೀರಿನ ಬಾಟಲ್ ಹುಡುಕಿದೆ , ಕೈಗೆ ತಾಗಿ ಬಾಟಲ್ ಬಿತ್ತು , ಅತ್ತ ಅಡಿಗೆ ಮನೆಯಲ್ಲಿ ಬೆಕ್ಕೊಂದು "ಮ್ಯಾವ್" ಅಂತ ಕಿರುಚಿಕೊಂಡು ಕತ್ತಲಲ್ಲೇ ಕೆಳಗೆ ಹಾರಿತು, ಸಮಯ ಎಷ್ಟಾಗಿರಬಹುದು?  ಬಂದದ್ದು ಆರೂವರೆಗೆ , ಮಳೆ ಏಳಕ್ಕೆಲ್ಲ  ಶುರುವಾಗಿತ್ತು , ಟೀ  ತಂದಿಟ್ಟು  ಒಳ ಹೋದವಳು ಕೋಣೆಯಿಂದ ಬಟ್ಟೆ ಬದಲಿಸಿ ಬಂದಳು, ಕೈ ಹಿಡಿದು ಮಾತಾಡುತ್ತಾ ಹೀಗೆ ಇಲ್ಲಿಯೇ ಕುಳಿತವಳು ಜಾರಿದಳು, ನಾನು ಅದು ಉನ್ಮತ್ತ ಸ್ಥಿತಿ ಅಂತ ಮೈಮರೆತೆ, ಆದರೆ ಮೈ ವಾಲಿ ಕೆಳಗೆ ಬಿದ್ದಾಗಲೇ ಅರಿವಾದ್ದು ಆದದ್ದು ಪ್ರಮಾದ , ದಿಗ್ಭ್ರಮೆ ಹಿಡಿದಿತ್ತು, ಕಿರುಚ ಬೇಕೆನ್ನುವ ಆತುರಕ್ಕೆ ಭಯ ತಡೆ ಹಿಡಿದಿತ್ತು ,ಮನೆಯಿಂದ ಒಂದೇ ಸಮನೆ ಫೋನ್ , ತೆಗೆದು ಸ್ವಿಚ್ ಆಫ್ ಮಾಡಿ ತಲೆ ಮೇಲೆ ಕೈ ಹೊತ್ತು ಕೂತವನಿಗೆ ಎಚ್ಚರಾದ್ದು ಈಗಲೇ , ಮಿದುಳಿನಲ್ಲಿ ನಾನು ನೋಡಿದ ಎಲ್ಲ ಚಿತ್ರಗಳು ಬಂದು ಹೋದವು, ದ್ರಿಶ್ಯಮ್ ನ ಜಾರ್ಜ್ ಕುಟ್ಟಿ , ಮನೆಯಲ್ಲೇ ಹೆಣ ಇಟ್ಟುಕೊಂಡು ಹೆದರುವ ತರ್ಕ, ಸರೋವರದಲ್ಲಿ ಪ್ರಿಯತಮನ ಜತೆ ಸರಸವಾಡಲು ಬಂದವಳ ಹೆಣ ಮುಳುಗಿಸುವ  ದ ಇಸ್ಲೆ ಯ ದೃಶ್ಯ ಎಲ್ಲವೂ, ಸಧ್ಯಕ್ಕೆ ನನಗೆ ಇರುವ ಭಯ ಯಾರದ್ದು ಪಟ್ಟಿ ಮಾಡತೊಡಗಿದೆ
೧) ಇವಳ ಗಂಡ(ಸಧ್ಯ ಬರಲಾರ , ಆರು ದಿನದ ಚೀನಾ ಪ್ರವಾಸ)
೨)ನನ್ನ ಹೆಂಡತಿ ( ಇದು ದೊಡ್ಡ ಸಮಸ್ಯೆ)
೩)ಕೆಲಸ-( ಕೊಲೆ ಕೇಸಿನಲ್ಲಿ ಸಿಕ್ಕಿ ಬಿದ್ದರೆ ಖಂಡಿತಾ ಉಳಿಯುವುದಿಲ್ಲ)

ತಕ್ಷಣಕ್ಕೆ ಈ ವಿಷಯ ಯಾರಲ್ಲಿ ಹೇಳಲಿ? ಯಾರು ನಂಬಿಗಸ್ಥರು ಅನ್ನುವುದು ನನಗೆ ತೋಚುತ್ತಿರಲಿಲ್ಲ, ನನ್ನ ಆತ್ಮ ಬಲವೆಲ್ಲ ಪಣಕ್ಕಿಟ್ಟು ಧೈರ್ಯ ತಂದುಕೊಂಡೆ, ಈಗ ಹೆದರಿದರೆ ಕೆಲಸವಾಗದು,ಅಲ್ಲಿಯೇ ತಡಕಾಡಿದೆ, ಎದ್ದು ಗೋಡೆಯ ಮೇಲೆ ಕೈಯಾಡಿಸುತ್ತಾ ನಾಲ್ಕು ಹೆಜ್ಜೆ ನಡೆದೇ. ದೀಪದ ಸ್ವಿಚ್ಚು ಕೈಗೆ ತಗಲಿತು , ಒಂದೊಂದಾಗಿ ಹಾಕುತ್ತ ಬಂದೆ ಮೂರನೆಯದ್ದು ಹಾಲಿನದ್ದು ಹೊತ್ತಿಕೊಂಡಿತು, ಬೆಳಕು ಕಣ್ಣು ಕುಕ್ಕುತ್ತಿತ್ತು, ಅವಳ ದೇಹ ಎತ್ತಲಾಗದ ಭಾರವಿತ್ತು, ಪ್ರಯತ್ನಿಸಲಿಲ್ಲ, ಕೈ ಉಗುರುಗಳನ್ನ ನೋಡಿದೆ, ಒಹ್ ಒಂದೇ ಗಂಟೆಯಾದ್ದರಿಂದ ಜೀವಂತ ಇದ್ದಂತೆಯೇ ಅನಿಸುತ್ತಿದ್ದವು,ಪಕ್ಕದಲ್ಲೇ ಕೂತು ಯೋಚಿಸತೊಡಗಿದೆ
ಸ್ಯಾಮುಯೆಲ್ - ಹೇಳಬಹುದು, ಒಳ್ಳೆಯವ , ಆದರೆ ನಂಬಿಕೆ ಇಲ್ಲ
ದೀಪಾ- ಸೀದಾ ಮನೆಗೆ ವಿಷಯ ತಲುಪುವುದು
ಮನೋಹರ- ಇಂತಹ ವಿಷಯದಲ್ಲೆಲ್ಲ ಹೈ ಇಂಪ್ಲ್ಯೂಯೆನ್ಸ್  ಮಾಡಿಸಬಹುದು, ಆದರೆ ಅವನಿಗೆ ನನ್ನವಳ ಮೇಲೆ ಅತಿಯಾದ ಆದರವಿದೆ , ಇದು ಅಪಾಯ, ಕೈ ಬಿಟ್ಟರು ಬಿಟ್ಟನೇ
ಹೆಂಡತಿ- ಹೋದ ಸಾರಿ ದೀಪಾಳ ಮನೆಯಲ್ಲಿ ಅವಳ ಗಂಡ ಮೋಸ ಮಾಡಿದ್ದನ್ನು ಕಂಡು ದಿಪಾಳಿಗೂ ಹೇಳದೆ ಅವನನ್ನು ಕರೆದು ಬೆದರಿಕೆ ಹಾಕಿ ಸರಿ ದಾರಿಗೆ ತಂದದ್ದನ್ನು ಕಂಡಿದ್ದೇನೆ ತಾನು, ಈಗ ತಾನು ಅದೇ ದಾರಿಯಲ್ಲಿದ್ದೆಯೆಂದರೆ ಏನು ಮಾಡುವಳು? ತಿಳಿಯದು, ಸಣ್ಣದಾಗಿ ತಲೆ ಸಿಡಿಯಲಾರಂಭಿಸಿತು, ಕಣ್ಣು ಕತ್ತಲೆಗಟ್ಟಿತು ಅಷ್ಟೇ!

ಎಚ್ಚರಾದಾಗ ಅವಳು ಎದುರು ಕೂತಿದ್ದಳು , ಕೈ ಚಾಚಿದೆ, ಮೃದುವಾಗಿ ಬೆರಳೊಡನೆ ಆಟವಾಡುತ್ತಾ ಸವರಿದಳು, ಮೈ ಝುಮ್ಮೆನ್ನುವ ಅನುಭವ, ಹಿತವಾಗಿ ಮುಗುಳ್ನಕ್ಕಳು, ನಾನು ನಂಬದವನಂತೆ ಪದೇ ಪದೇ ಕಣ್ಣುಜ್ಜಿದೆ, ಸೋಫಾದ ಕೆಳಗೆ ನೋಡಿದೆ, ಅಲ್ಲಿ ದೇಹ ಬಿದ್ದಿದ್ದ ಯಾವ ಗುರುತು ಇರಲಿಲ್ಲ,"ನಾನು ಭೂತವಾಗಿದ್ದೀನಾ ಅಂತ ಪರೀಕ್ಷಿಸುತ್ತಿದ್ದೀಯಾ?" ಅವಳ ತಣ್ಣನೆಯ ಹರಿತ ದನಿ ತೇಲಿಬಂತು, ಬಲವಂತದ ನಗು ನಕ್ಕೆ, "ಹೇಳು, ನನ್ನ ಯಾಕೆ ಬಿಟ್ಟು ಹೋದೆ?" "ಅ ... ಅ ... ಅದೂ , ಪ್ಲೀಸ್ ಈಗ್ಯಾಕೆ ಹಿಂದಿನ ಮಾತು , ಬಿಟ್ಟು ಬಿಡು, ಈಗ ನನ್ನ ಬರಹೇಳಿದ್ಯಾಕೆ ಮೊದಲು ಹೇಳು , ಪ್ಲೀಸ್" ನಾನು ಅಂಗಲಾಚಿದೆ, "ಇಲ್ಲ, ಕಾರಣ ಹೇಳಲೇಬೇಕು, ನೀನು ಕಾರಣ ಹೇಳಿದರೆ ನಾನು ನಿನಗೆ ಅತಿ ಮುಖ್ಯ ವಿಷಯ ಹೇಳೋದು" ಅವಳು  ತುಂಟತನದಲ್ಲಿ(ಬಹುಶಃ ಅದು ನನ್ನ ಕಲ್ಪನೆಯೇ? ನನಗರ್ಥವಾಗಲಿಲ್ಲ)ಅವಳ ಕೆಳ ತುಟಿ ಕಚ್ಚಿದಳು, ನಾನು ಸಲ್ಪ  ಹಗುರಾದೆ.
"ನಿಜ ಹೇಳಲಾ,ಸುಳ್ಳ?" ಓ , ಇದು ನಾವಿಬ್ಬರು ಯಾವಾಗಲೂ ಆಡುತ್ತಿದ್ದ ಆಟ , ತುಂಬಾ ಸಾರಿ ಅವಳು ಪರವಾಗಿಲ್ಲ ಸುಳ್ಳೇ ಹೇಳು ಅಂತಿದ್ದಳು , ನನಗೆ ಹೂ ಮಲೆಯಲ್ಲಿ  ಕಳೆದ ರಾತ್ರಿ ನೆನಪಾಗಿ ಮೈ ಬಿಸಿಯಾಯ್ತು,
ಅವತ್ತು ಪೂರ್ಣ ಬೆಳದಿಂಗಳ ದಿನ , ಇವತ್ತು ರಾತ್ರಿ ಬರ್ತಿಯಾ? ಅಂತ ಅವಳನ್ನ ಕೇಳಿದ್ದೆ ಎಲ್ಲಿಗೆ ಅಂತ ತಡವರಿಸಿದ್ದಳು ಹೂ ಮಲೆಯ ತುದಿಗೆ ಹೋಗೋಣ, ಇವತ್ತು ಹುಣ್ಣಿಮೆ  ಅಂದಾಗ ಭಯವಾಗುತ್ತೆ ಅಂದಿದ್ದಳು, ನಾನು ಒತ್ತಾಯಿಸಿದಾಗ ಒಪ್ಪಿ ನಾನು ಹೇಳಿದ ಜಾಗಕ್ಕೆ ಬಂದಿದ್ದಳು, ನಂತರ ಒಂದು ಗಂಟೆ ಉಸಿರು ಬಿಗಿ ಹಿಡಿದು ಹತ್ತಿದ್ದೆವು, ಹಾಲು ಮಂಟಪ, ಅದರ ತುದಿಯ ಮೇಲೆ ಸೂರ್ಯನ ಬೆಳಕು ಅಥವಾ ಚಂದ್ರನ ಬೆಳಕು ಯಾವುದು ಬಿದ್ದರು ಇಡೀ ಮಂಟಪದಲ್ಲಿ ಬೆಳಕು ಕೋರೈಸುತ್ತಿತ್ತು, ಹಾಗೆಂದೇ ಅದಕ್ಕೆ ಹಾಲು ಮಂಟಪ ಅನ್ನುತ್ತಿದ್ದರು ಯಾವ ದೊರೆಯೊ ಯಾವ ಪ್ರೇಯಸಿಗೋ ಕಟ್ಟಿದ ಕಥೆ ಊರ ತುಂಬೆಲ್ಲ ಹಾಡಾಗಿ ಕಥೆಯಾಗಿ ಹರಿದಾಡಿಕೊಂಡಿತ್ತು , ನನ್ನ ಅತಿ ರಹಸ್ಯಗಳನ್ನೆಲ್ಲ ಬಚ್ಚಿಟ್ಟುಕೊಂಡ ಈ ಮಂಟಪ ನನಗೆ ಬಹಳವೇ ಪ್ರಿಯವಾದ್ದು, ಅವತ್ತು ಕುಳಿತು ಬೆದರಿಕೆಯ ಕಣ್ಣಲ್ಲಿ ಬೆಳಗು ಹರಿವುದರೊಳಗೆ ನನಗೆ ನಮ್ಮನೆಯ ಹಿತ್ತಲಿಗೆ ಬಿಟ್ಟು ಬಿಡು ಅಂದಾಗ ನನಗೆ ಆ ಭಯ ತಮಾಷೆಯಂತೆ ಕಾಣಿಸಿತ್ತು ಮತ್ತೆ ಅವಳನ್ನು ಕೆಣಕಿದ್ದೆ ಸತಾಯಿಸಿದ್ದೆ ಅವಳು ಸತ್ಯ ಹೇಳು, ನಿನಗೆ ನಾನೇಕಿಷ್ಟ ಅಂದಾಗ ಸುಳ್ಳು ಹೇಳಲಾ ಸತ್ಯ ಹೇಳಲಾ ಅಂತ ಕೇಳಿದ್ದೆ, ಅವಳು ಮುಗ್ಧೆಯಾಗಿ  ಸತ್ಯ ಹೇಳು ಅಥವಾ ನಿನಗಿಷ್ಟ ಆಗಿದ್ರೆ ಸುಳ್ಳು ಹೇಳು ಅಂದಾಗ ನನಗೆ ಈ ಕ್ಷಣಕ್ಕೆ ನೀನಿಷ್ಟ ಅಂದು ಸುಮ್ಮನಾಗಿದ್ದೆ, ಅವಳೂ  ಹಠಕ್ಕೆ ಬಿದ್ದವಳಂತೆ ನನಗೆ ನೀನಿಷ್ಟವೇ ಇಲ್ಲ ಅಂದಿದ್ದಳು ಬಹುಶಃ ಅವಳ ಕಾಣುಗಳಲ್ಲಿದ್ದ ನೀರು ಪಸೆ ನನ್ನ ಕೈಗಂಟಿತ್ತು, ಅದನ್ನೊರೆಸುತ್ತ್ತ ಹೋದ ಬೆರಳಿಗೆ ಅವಳ ಮೂಗಿನ ನತ್ತು ಹಣೆಯ ಬೆವರು ಅದುರುತ್ತಿದ್ದ ತುಟಿಗಳೂ  ಏರಿಳಿಯುತ್ತಿದ್ದ ಎದೆಯ ಲಯತಪ್ಪಿದ  ಹಾಡೂ  ಕೇಳಿಸಿತ್ತು, ನಾನು ಉನ್ಮತ್ತನಾಗಿದ್ದೆ ಅವಳ ದೇಹದ ತುಂಬೆಲ್ಲ ಅಂತಿದ್ದ ಅದಾವುದೋ ಮಾಯಕದ ಸುವಾಸನೆ ನನ್ನ ಕಟ್ಟಿ ಹಾಕಿತ್ತು,  ಅವಳು ಅವತ್ತು ಬೆಳದಿಂಗಳಿನಲ್ಲಿ ಕನವರಿಸಿದ್ದಳು"ನಿನ್ನ ಬಿಟ್ಟು ಬದುಕಲಾರೆ, ಈ ಸುಖದಾಣೆ ಸತ್ಯ"

"ಮತ್ತೆ ನನ್ನ ಹಾಲು ಮಂಟಪಕ್ಕೆ ಕರಿಬೇಡ"ಅವಳ ದನಿ ಎಚ್ಚರಿಸಿತು, ತಬ್ಬಿಬ್ಬಾಗಿ ನೋಡಿದೆ, ಇವಳು ನಿಜವಾಗಲೂ ನನ್ನ ಎದುರಿಗಿದ್ದಾಳೆ ಅನ್ನುವುದು ರೋಮಾಂಚನವನ್ನು ಭಯವನ್ನು ಒಟ್ಟಿಗೆ ತರುತ್ತಿತ್ತು, ನನ್ನ ಮನಸ್ಸನ್ನು ಓದುತ್ತಿದ್ದಾಳೆ ಅನ್ನುವುದು ಭಯವನ್ನು ಇನ್ನು ಹೆಚ್ಚಿಸಿತ್ತು, "ನೀನ್ಯಾವತ್ತು ಅಷ್ಟು ಕ್ರೂರಿಯಾಗಿ ನನ್ನ ಕಣ್ಣಿಗೆ ಕಾಣಲೇ ಇಲ್ಲ, ಅದೆಷ್ಟೋ ಸಾರಿ ನಿನ್ನ ಕ್ಷಮಿಸಿದ್ದೀನಿ ಅನ್ನೋ ಭ್ರಮೆಯಲ್ಲಿ ಬದುಕೋಕೆ ಪ್ರಯತ್ನಿಸಿದೆ, ನೀನು ಸಿಕ್ಕಿದ ಜಾಗಗಳನ್ನೆಲ್ಲ ಒಂದೊಂದಾಗಿ ನಿರಾಕರಿಸುತ್ತಾ ನಿರಾಕರಿಸುತ್ತ.... ಈಗ ಇಡೀ ಜಗತ್ತೇ  ಬೇಡ ಅನಿಸಿಬಿಟ್ಟಿದೆ," ಅವಳು ಮಾತಾಡುತ್ತಾ ಹೋದಳು"ಅಷ್ಟಕ್ಕೂ ಯಾರನ್ನಾದರೂ ಈ ತರಹ ನಮ್ಮೊಳಗೇ ಬಿಟ್ಟು ಕೊಳ್ಳುವ ಅವಶ್ಯಕತೆ ಏನಿರುತ್ತೆ? ನನಗೆ ಉತ್ತರ ಸಿಕ್ಕಿಲ್ಲ, ನೀನವತ್ತು  ಹಿಡಿದ ಕೈ ಕೊಡವಿ ಬಸ್ಸು ಹತ್ತಿದೆ ಅಲ್ಲ ಅವತ್ತು ನನ್ನ ಮನಸಿಗೆ ಖಾತ್ರಿ ಆಗಿತ್ತು ತಿರುಗಿ ಬರಲಾರೆ ಅಂತ, ಆದರೂ ನೋಡು ಆಗದ್ದನ್ನ ಆಗೇ ಬಿಡುತ್ತೆ ಅಂತ ಬಯಸುತ್ತಾ ಅದಕ್ಕಾಗಿ ಭ್ರಮಿಸುತ್ತಾ ಹುಡುಕಾಡುತ್ತಾ ಮನಸ್ಸು ತನ್ನ ತಪ್ಪಿದ ಲಯ ಕಂಡುಕೊಳ್ಳೋಕೆ ಪ್ರಯತ್ನಿಸುತ್ತೆ, ನೀನು ಹೋದ ಮೇಲೆಯೇ ನಾನು ನಿನ್ನ ಬಗ್ಗೆ ಬಹಳಷ್ಟು ತಿಳಿದುಕೊಂಡೆ, ನೀನು ನನ್ನಿoದ ಮುಚ್ಚಿಟ್ಟ ಎಲ್ಲ ವಿಷಯಗಳು ನನಗೆ ಗೊತ್ತಾಗುತ್ತಾ ಹೋದವು, ನೀನೊಂದು ಭ್ರಮೆಯಲ್ಲಿ ನನ್ನ ಬದುಕಲು ಬಿಟ್ಟಿದ್ದೆ, ನಾನು ಅದನ್ನೇ ಬಹಳ ಕಾಲ ಜೀವಿಸಿದ್ದೆ ಅನ್ನುವ ಸತ್ಯ ನನಗೆ ಅರಿವಾಗುತ್ತಾ ಹೋಯಿತು, ಆದರೆ ಈಗ ಬಂದದ್ದು ಮಾತ್ರ ನಿನ್ನ ಬಾಯಿಂದ ಕಾರಣ ಕೇಳಲು, ಹೇಳು , ಅದು ಯಾವ ಕಾರಣ ನಿನ್ನ ಇಲ್ಲಿಗೆ ನನ್ನಿಂದ ದೂರ ಎಳೆದು ತಂದದ್ದು" ಅವಳ ದ್ವನಿ  ತೀವ್ರ ವಾಗುತ್ತಾ ಸಾಗಿತ್ತು , ನಾನು ಮಾತಾಡಲೇ ಬೇಕಿತ್ತು "ನಿನ್ನ ಬಿಟ್ಟು ಬರಲು ಅಂಥಾ ಕಾರಣ ಏನಿರಲಿಲ್ಲ, ಆದರೂ ನಾನು ಬಹುಶಃ ಬಂಧನಗಳಿಗೆ ಹೆದರಿದ್ದೆ, ಅಥವಾ ಪಲಾಯನ ನನ್ನ ರಕ್ತದಲ್ಲಿಯೇ ಇದೆ ಅ೦ದರು ಸರಿಯಾದೀತು, ನನಗೆ ಇನ್ಯಾವುದೋ ಕಾಣದ ಸೆಳೆತದ ಹುಡುಕಾಟ ಇತ್ತು ಅನಿಸುತ್ತೆ" ನನ್ನ ಮಾತು ಮುಗಿವ ಮೊದಲೇ ಜೋರಾಗಿ ನಕ್ಕಳು ಅವಳು, ತೀರಾ ಅಸಹಜ ನಗು, ನನ್ನ ಹೃದಯ ಬಡಿತ ಮತ್ತೆ ಏರಿತು, ಭಯದಲ್ಲಿ, ಭಯವನ್ನು ಮುಚ್ಚಿಡಲು ಯತ್ನಿಸುತ್ತಾ ಅವಳನ್ನೇ ನೋಡಿದೆ"ಹುಚ್ಚಾ , ಆತ್ಮಸಾಕ್ಷಿ  ಸತ್ತು ಹೋಗಿದೆ ನಿಂಗೆ ಏಳೋ ಎದ್ದೇಳು, ನಿನಗೆ ಪಲಾಯನ ವಾದವಲ್ಲ, ಹತ್ತಿದ್ದು ದೇಹಗಳ ಸುವಾಸನೆಯ ಮತ್ತು, ನಿನ್ನೊಳಗಿನ ಮೃಗ ಕೇವಲ ದೇಹದ ಸಾಂಗತ್ಯ ಅಷ್ಟೇ ಬಯಸಿದ್ದು, ಅದಕ್ಕೆ ಬೇರೆಯ ಹೆಸರಿಟ್ಟು ವಂಚಿಸುತ್ತಾ ಬಂದವ ನೀನು" ಬೆ೦ಕಿಯ ಧಾರೆ ದನಿಯಲ್ಲಿ,
ನಾನು ನಡುಗಿದೆ , "ನಿನೊಂದೆ ಅಲ್ಲ ನಿನ್ನಂಥ ಎಲ್ಲರಿಗು ಇದೊಂದೇ ದಾರಿ ಬದುಕಿನ ಸತ್ಯಗಳನ್ನ ಎದುರಿಸಲಾಗದೆ ಓಡುತ್ತಾ ಓಡುತ್ತಾ ದಾರಿಗಳೇ ಇಲ್ಲದ ಕಡೆ ತಲುಪಿಬಿಡುತ್ತೀರಿ, ನೀನು ನನ್ನಿಂದ ಕಿತ್ತುಕೊಂಡಿದ್ದು ಏನು ಗೊತ್ತಾ, ಪಾಪ ಪ್ರಜ್ಞೆ, ನಾನು ಸತ್ತು ಹುಟ್ಟಿದೆ, ಬಹಳ ಸಲ, ಇನ್ನೀಗ ನಿನ್ನ ಸರದಿ" ನಾನು ಬಾಯ್ತೆರೆವ ಮೊದಲೇ ಅವಳು ನಕ್ಕಳು "ನೀನು ಮದುವೆಯಾಗಿದ್ದೀಯಲ್ಲ, ಸುಖ ಸಿಕ್ಕಿತಾ, ನೀನು ಹುಡುಕುತ್ತಿದ್ದ ಆ ನೆಮ್ಮದಿ, ನನ್ನ ಬಿಟ್ಟು ಇನ್ನೊಂದು ದೇಹದಲ್ಲಿ ನೀನು ಅರಸುತ್ತಿದ್ದ ಆ ನೆಮ್ಮದಿ ಕ್ಷಣವಾದರೂ ಸಿಕ್ಕಿತಾ? ಇರುವ ಇಷ್ಟು ಸಣ್ಣ ಜೀವನವನ್ನ ಹೊಂದಿಕೆ ಇಲ್ಲದೆ ಅಳುತ್ತ ಕಳೆಯುತ್ತೀದ್ದಿ , ನಿನಗೆ ನಂಬಿಕೆ ಇಲ್ಲ ಯಾವುದರಲ್ಲೂ, ಸ್ವತಃ ನಿನ್ನಲ್ಲೂ ,ಅದಕ್ಕೆ ಬರಿ ಭ್ರಮೆಯಾದ ನಾನು ನಿನಗೆ ಕಾಣುತ್ತಿರುವುದು" ಎಂದು ನಕ್ಕಳು, ನಾನು ಅವಳನ್ನೇ ನಂಬಲಾರದವನಂತೆ ನೋಡಿದೆ,  ಕೈ ಚಾಚಿದಳು , ನಾನು ತಪ್ಪಿಸಿಕೊಳ್ಳಲೆತ್ನಿಸಿ ಓದಿದೆ ಓಡಿದೆ ,  ಕೈಗಳು ಕಬಂಧವಾಗಿ ನನ್ನ ಹಿಡಿಯುತ್ತಲೇ ಹಿಂದೆ ಬಂದಿತು , ಅಷ್ಟೊತ್ತಿಗೆ ನಾನು ಟೆರ್ರೇಸಿನ ಮೇಲಿದ್ದೆ , ಕೆಳಗೆ ಹಾರಿದ್ದಷ್ಟೇ ಗೊತ್ತು, ಕಣ್ಣು ಮತ್ತೆ ಕತ್ತಲೆಗಟ್ಟಿತು
ಎಚ್ಚರಾದಾಗ ಎದುರಲ್ಲಿ ಅವಳ ದೇಹ ಇರಲಿಲ್ಲ  ಬಹುಶಃ ನಾನು ಯಾವ ಅವಸ್ಥೆಯಲ್ಲಿ ಕನಸು ಕಂಡೆನೋ , ನನಗೆ ಸತ್ಯ ಸುಳ್ಳುಗಳ ವ್ಯತ್ಯಾಸ ತಿಳಿಯಲಿಲ್ಲ, ಮೊಬೈಲ್ ಆನ್  ಮಾಡಿದೆ ಮನೆಯಿಂದ ಬಂಡ ಬಹಳಷ್ಟು ಕಾಲ್ಗಳು, ಇಲ್ಲ ಇವತ್ತು ಸುಳ್ಳು ಹೇಳಲಾರೆ, ಹೆಂಡತಿಗೆ ಫೋನಾಯಿಸಿದೆ " ಸುಜೀ , " "ರೀ ಏನ್ರೀ  ಎಲ್ಲಿ ಇದ್ದೀರಾ. ಬೇಗ ಬನ್ನಿ " ಇಲ್ಲೆಲ್ಲೋ ಸಿಕ್ಕಾಕಿಕೊಂಡಿದ್ದೀನಿ ಈಗ ಸಮಯ ಎಷ್ಟು ಹೇಳು" "ಅಯ್ಯೋ ಕೈಲಿ ಮೊಬೈಲ್ ಇಲ್ವಾ, ಎಲ್ಲಿದ್ದೀರಾ ಹೇಳಿ, ನಾನು ವಿಳಾಸ ಕೊಟ್ಟೆ, ನಂತರ ಒಳ ಹೋಗಿ ನೀರು ಕುಡಿದು ಸೋಫಾದ ಮೇಲೆ ಕಾಲುಚಾಚಿದೆ , ಅವಳ ಬಿಸಿಯುಸಿರು ನನ್ನ ಎದೆಗೆ ತಾಕುತ್ತಿತ್ತು ಸಣ್ಣದಾದ ಮುಗುಳ್ನಗುವು, ಹೂ ಮಳೆಯ ಬಳದಿಂಗಳಲ್ಲಿ ನಾನು ಅವಳ ಕೈ ಹಿಡಿದ ಕ್ಷಣಗಳೆಲ್ಲ ಕಣ್ಣೆದುರೇ ನಡೆಯಲಾರಂಭಿಸಿದವು , ಮನೆಯ ಬಾಗಿಲು ತಟ್ಟಿದ ಶಬ್ದ , ನಂತರ ತೆರೆದ ಶಬ್ದ , ನಾನು ದಿಗ್ಭ್ರಮೆ ಹಿಡಿದವನಂತೆ ನೋಡುತ್ತಿದ್ದೆ,
ನನ್ನ ಹೆಂಡತಿಯನ್ನು ಒಳಗೆ ಬರ ಮಾಡುತ್ತಿದ್ದವಳು ಅವಳು, ಹಿಂದೆಯೇ ದೀಪಾ , ಸ್ಯಾಮ್ಯುಯೆಲ್ ಎಲ್ಲರು ಒಳ ಬಂದರು,
ಅವಳು ನನ್ನ ಕಡೆ ಕೈ ತೋರಿಸಿ ಗಾಭರಿ ಇಂದ ಏನೋ ಹೇಳುತ್ತಿದ್ದಳು, ನನ್ನ ಹೆಂಡತಿ ಚೀರಿದ್ದು ಕೇಳಿಸಿತು, ಜತೆಗೆ ಜೋರಾಗಿ ಅಳುವ ಶಬ್ದವೂ , ನಾನು ಅತ್ತಲೂ ಹೋಗಲಾಗದೆ ಅವಳನ್ನು ಬಿಡಲಾಗದೆ ಹೂಮಾಲೆಯ ಹಾದಿಯಲ್ಲಿ ಅಲೆಯುತ್ತಿದ್ದ ಭ್ರಮೆಗೆ ಸಿಕ್ಕಿದೆ,
ಸತ್ತಿದ್ದು ಯಾರು, ನನಗೆ ನಿಜವಾಗಲೂ ತಿಳಿಯುತ್ತಿಲ್ಲ

ಹೃದಯದ ಭಾಷೆ

ಅದು ಪ್ರಾಕ್ಟಿಕಲ್ ಕ್ಲಾಸ್,ನಾನು ನಿಟ್ಟಿಂಗ್ ಕಡ್ಡಿ ಹಿಡಿದು ಕಷ್ಟ ಪಟ್ಟು ನಿಟ್ ಪರ್ಲ್ ಅಂತ ಎಣಿಸುತ್ತಾ ಕಲೀತಿದ್ದೆ...ಆಗ ಜವಾನ ಬಂದು ನನ್ನ ಹೆಸರು ಕೂಗಿದ...ನನಗೆ ಆಶ್ಚರ್ಯ...ಹೊರಬಂದು ನೋಡಿದರೆ ಅಪ್ಪ ನಿಂತಿದ್ದರು...ಬಿಳಿ ಪಂಚೆ..ಅದರ ಮೇಲೆ ತುಸು ಮಾಸಿದ ಬಿಳಿ ಶರ್ಟ್..ಬೇಸಿಗೆಯ ಧಗೆಗೆ ಅರೆ ತೆರೆದಿದ್ದ  ಅಂಗಿಯ ಗುಂಡಿಗಳು,  ಕೆಲಸದ ಮೇಲೆ ಆ ಊರಿಗೆ ಬಂದಿದ್ದರು..ಮತ್ತು ಹಾಗೆ ನನ್ನ ನೋಡಲು ಬಸ್ ಹಿಡಿದು ಬಂದಿದ್ದರಂತೆ...ನನ್ನ ತಂದೆಯನ್ನ ನೋಡಿ ನಮ್ಮ ಪ್ರಿನ್ಸಿಪಲ್ ಮಾತಾಡಿಸಿದರು...ಆ ಸಮಯ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಯ..ಅಮ್ಮ ತುಪ್ಪ ಬೆಲ್ಲ  ತಿಂಡಿಗಳನ್ನ ಕಳುಹಿಸುತ್ತಿದ್ದಳು   ..ಆದರೆ ಹಾಸ್ಟೆಲ್ಲು ಮತ್ತೆ ಫೀಸು ಹಾಗೂ ಕೋರ್ಸಿಗೆ ಸಂಬಂಧ ಪಟ್ಟಖರ್ಚುಗಳು ಅಪ್ಪನ ಬಹುಪಾಲು ಆದಾಯ ನುಂಗುತ್ತಿತ್ತು..ಅಪ್ಪ ದುಡ್ಡು ಹೊಂದಿಸುವುದರ ಬಗ್ಗೆ ಹೈರಾಣಾಗುತ್ತಿದ್ದರು...ಅಪ್ಪ ನನಗೆ ಫೀಸು ಮತ್ತೆ ಕೈ ಖರ್ಚಿಗೆ ಹಣ ಇತ್ತು ನಿರ್ಗಮಿಸಿದರು...ಪ್ರಿನ್ಸಿಪಲ್ ನನ್ನ ಕೇಳಿದರು.."ನಿಮ್ಮ ತಂದೆ ಏನು ಕೆಲಸ ಮಾಡ್ತಾರೆ?" ಅಲ್ಲಿ ಬರ್ತಿದ್ದವರ ಅಪ್ಪಂದಿರು ಪ್ಯಾಂಟ್ ಶರ್ಟ್ಧಾರಿಗಳು..ಮತ್ತು ಆದಷ್ಟು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದವರು...ನಾನು ಆತ್ಮವಿಶ್ವಾಸದಿಂದ ಉತ್ತರಿಸಿದೆ..."ಅವರು ರೈತರು,ನಮ್ಮನೆಯಲ್ಲಿ ತೋಟ ಇದೆ..ಸಲ್ಪ ಗದ್ದೆಯೂ, " ಅಂದೆ ,"ಹೌದಾ" ಅಂದಷ್ಟೆ ಹೇಳಿ ನಿರ್ಗಮಿಸಿದರು...

ಮುಂದೆ ಒಂದು ವರುಷದಲ್ಲಿ..ಮತ್ತೆ ಭೇಟಿಯಾಗ ಬೇಕಾಯ್ತು ಪ್ರಿನ್ಸಿಪಲ್ ಮತ್ತು ನನ್ನಪ್ಪ..ಹಾಸ್ಟೆಲ್ಲಿನಲ್ಲಿ ಆದ ಸಣ್ಣ ಕಳ್ಳತನವೊಂದಕ್ಕೆ ನನ್ನ ಅಪರಾಧಿಯನ್ನಾಗಿಸಿ ನಮ್ಮ ವಾರ್ಡನ್ ಅಪ್ಪನನ್ನ ಕರೆಸಿದ್ದರು...ಅವರು ಸಂಶಯ ಪಡಲು ಇದ್ದ ಕಾರಣ ಇಷ್ಟೇ.. ಕಳ್ಳತನ ಆದ ದಿನ ನಾನು ಊರಿಗೆ ಹೋದದ್ದು...ನನ್ನ ಇಡೀ ವಾರ್ಡ್ ರೋಬ್ ನನ್ನ ವಸ್ತುಗಳು ಎಲ್ಲದನ್ನೂ ಕಿತ್ತೆಸೆಯಲಾಗಿತ್ತು....ಕಾರಣವೇ ಗೊತ್ತಿರದಿದ್ದ ನಾನು ಕುಸಿದು ಕೂತಿದ್ದೆ...ಏನು ಗೊತ್ತಿಲ್ಲದ ನನ್ನ ಹೌದು ಅಂತ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು..ಕಾರಣ ಆ ಹುಡುಗಿಯ ತಂದೆ ಭದ್ರಾವತಿಯವರು..ಗೂಂಡಾಗಿರಿಗೆ ಹೆಸರಾದ ಊರದು....ಆಕೆಯ ತಂದೆ ಅಣ್ಣ ಎಲ್ಲರೂ ಬಂದು ಹೆದರಿಸಿಹೋಗಿದ್ದರಂತೆ..ಅವತ್ತಿನ ದಿನ ಹೋಳಿ...ಇನ್ನೂ ನೆನಪಿದೆ...ಅಪ್ಪ ನನ್ನ ಕೈ ಜಗ್ಗಿ ಕೇಳಿದ್ದರು"ಕದ್ದಿದ್ದೀಯಾ" ಕದ್ದಿದ್ದರೆ ಅಪ್ಪನ ಎದುರು ಒಪ್ಪಿಬಿಡುತ್ತಿದ್ದೆ..ವಿಷಯವೇ ಗೊತ್ತಿಲ್ಲದ ನಾನು ಅಸಹಾಯಕಳಾಗಿ ಅತ್ತಿದ್ದೆ..."ಹೆದರಬೇಡ..."ಎಂದು ನನ್ನ ತಲೆ ಸವರಿ ಹೋದ ಅಪ್ಪ ಐದು ನಿಮಿಷದಲ್ಲಿ ನನ್ನ ಕರೆದಿದ್ದರು...ನಾನು ಧೈರ್ಯವಾಗಿ ಹೇಳಿದ್ದೆ..ಕದ್ದಿಲ್ಲ ಅಂತ...ಅವತ್ತು ಅಪ್ಪ ಅವರೊಡನೆ ತಮ್ಮ ವಿದ್ಯಾಬ್ಯಾಸದ ಬಗ್ಗೆ ಮಾತಾಡಿದ್ದರು...
ಇದೆಲ್ಲ ಮುಗಿದ ಮೇಲೆ ಎರಡು ದಿನ ಬಿಟ್ಟು ನನ್ನ ಕರೆಸಿದ ಪ್ರಿನ್ಸಿಪಲ್ ಹೇಳಿದ್ದು ಒಂದೇ ಮಾತು"ನಿಮ್ಮ ತಂದೆ ಬಹಳ ಗೌರವಸ್ಥರು..ಅಷ್ಟೆಲ್ಲ ಓದಿ ಹಳ್ಳಿಗೆ ಬಂದು ಕೃಷಿಯನ್ನ ಕೃಷಿಯನ್ನ ಉದ್ಯೋಗ ಮಾಡಿಕೊಂಡಿದ್ದಾರೆ, ಮತ್ತು ಇಲ್ಲದ ಊರನ್ನ ಕಟ್ಟಿ ಬೆಳೆಸಿದ್ದಾರೆ, ಸುಮಾರು ಕುಟುಂಬಗಳಿಗೆ ಅಶ್ರಯದಾತರಾಗಿದ್ದಾರೆ, ಅಂಥವರ ಮಗಳು ನೀನು, ಅವರಿಗೆ ಹೆಮ್ಮೆಯಾಗುವಂತೆ ಬದುಕು, ಯಾವುದೇ ಕಷ್ಟಕ್ಕೂ ಸುಲಭಕ್ಕೆ ತಲೆತಗ್ಗಿಸಬೇಡ,ಯಾವ ಅಪಮಾನ ಅವಮಾನವನ್ನು ಗೌರವದಿಂದಲೇ ಎದುರಿಸು, ಕಷ್ಟದ ಸಮಯದಲ್ಲಿ ನಾವು ಧೈರ್ಯಗೆಟ್ಟರೆ ನಮ್ಮ ಮೇಲಿನ ಆಪಾದನೆಗಳು ಸತ್ಯವೆಂದು ಸಾಬೀತಾಗುತ್ತದೆ, ಇದಕ್ಕಿಂತ ಇನ್ನೂ ಎಷ್ಟೋ ಕಷ್ಟದ ಕ್ಷಣಗಳು ಬರಬಹುದು, ಅದು ನಮ್ಮನ್ನು ಶುದ್ಧಗೊಳಿಸುತ್ತದೆ ಅಂತಲೇ ಭಾವಿಸಿ ಸ್ವೀಕರಿಸು," ನಾನು ಅಪ್ಪನ ಕಡೆ ಹೆಮ್ಮೆಯಿಂದ ನೋಡಿದೆ, 
ಇವತ್ತಿಗೂ ನನಗೆ ಅವರು ಹೇಳಿದ ಮಾತುಗಳಲ್ಲಿ ನನ್ನಪ್ಪನೆ ಕಾಣುತ್ತಾರೆ, ಮಾನಸಿಕ ಕ್ಷೋಭೆಯ ಕಾಲದಲ್ಲಿ ನನ್ನ ಮನೋಬಲವನ್ನು ಮತ್ತೆ ಮತ್ತೆ ಹೆಚ್ಚಿಸುತ್ತಾರೆ. ನಮ್ಮ ಬಟ್ಟೆ, ನಮ್ಮ ಭಾಷೆ ಇವೆಲ್ಲ ವ್ಯಾಖ್ಯಾನವನ್ನು  ಮೀರಿದ ಹೃದಯದ ಭಾಷೆ ಒಂದಿದೆ. ಅದನ್ನಷ್ಟೇ ನಾವು ಈಗಿನ ದಿನಮಾನದಲ್ಲಿ ಅಗತ್ಯವಾಗಿ ಪರಿಗಣಿಸಬೇಕಾಗಿರುವುದು. ಹಣ ಸಂಸ್ಕೃತಿಯ ಸುತ್ತ(ಹಣ ಅಗತ್ಯವೇ ಸರಿ) ಕುಣಿಯುವ ಇವತ್ತಿನ ಜಗತ್ತಿಗೆ,  ವಸ್ತುಗಳಷ್ಟೆ ನಮಗೆ ಬೆಲೆ ತರುವುದು ಎಂದು ಭಾವಿಸಲಾದ ಈ ಜಗತ್ತಿಗೆ ಆರ್ದ್ರತೆಯ, ಭಾಷೆಗಳನ್ನು ಮೀರಿದ  ಹೃದಯದ ಭಾಷೆ ಕಲಿಸಲೇ ಬೇಕಿದೆ ಇಲ್ಲವಾದರೆ  ನಮ್ಮ ಸುಂದರ ಜಗತ್ತಿನ ಆಸೆ ಕೇವಲ ಕನಸುಗಳಲ್ಲಿ ಮಾತ್ರ ಉಳಿದೀತು.