Google+ Followers

Thursday, August 17, 2017

ಮಧುಮಾಸ ಚಂದ್ರಮ

ಇವತ್ತು ನಿನ್ನ ನೆನಪಾಗ್ತಿದೆ, ತುಂಬಾ ಅಂದರೆ ತುಂಬಾ, ಸಣ್ಣಗೆ ಬಿಸಿಲು ಕಾಯುವ ಮಧ್ಯಾಹ್ನಗಳಲ್ಲಿ ನಾನ್ಯಾವತ್ತೂ ನಿನ್ನೇ ಕಾಯುತ್ತಿದ್ದೆ, ಪುಟ್ಟ ಪಾರಿವಾಳವೊಂದು ಬೆಚ್ಚನೆಯ ಗೂಡಿಂದ ಕಾಣೆಯಾದರೆ ಅದೆಂಥ ಆಘಾತ ಅಲ್ಲವಾ?
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ
ಒಲವಿನ ಲೋಕಕೆ ನೀ ತಂದೆ ಪೂರ್ಣಿಮಾ....
ನೀನು ಹೊಸಬನಲ್ಲ, ಹಳಬನು ಅಲ್ಲ, ನಮ್ಮ ಪ್ರೇಮಕಥೆಗೆ ಅದ್ವಿತೀಯ ನಾಯಕನಲ್ಲ, ಆದರೂ ಬಾರಿ ಬಾರಿ ನಿನ್ನೇ ಬಯಸಿದ್ದು, ತನ್ಮೂಲಕ ನಾನು ಬಹುಶಃ ನನ್ನೇ ಹುಡುಕಿದ್ದು ನನಗೆ ಗೊತ್ತಿರುವ ವಿಷಯ, ನಿಜ ವರುಷ ಕಳೆದಂತೆಲ್ಲಾ ಜವಾಬ್ದಾರಿಗಳು ಬದಲಾಗುತ್ತವೆ, ಪ್ರಾಮುಖ್ಯತೆಗಳೂ, ಆದರೆ ಅದಕ್ಕೆಲ್ಲ ಮೂಲ ಪ್ರೇಮವನ್ನೇ ಬಿಟ್ಟು ಬೇರೆಲ್ಲ ಕಡೆ ಕೈ ಚಾಚಿದರೆ ನೆಮ್ಮದಿ ದೊರಕುತ್ತದಾ? ಇಲ್ಲ. ನೀನೀಗ ಅದನ್ನೇ ಮಾಡುತ್ತಿದ್ದಿ.
ನಾನಿಲ್ಲೆ ಇದ್ದೇನೆ ಎಂದು ಒಮ್ಮೆ ತೋಳ್ ಚಾಚಿ ನೀನಪ್ಪಬಾರದೆ? ನನ್ನ ತಲೆ ನೇವರಿಸಿ ಒಮ್ಮೆ ನೀನಿರು ಜತೆಗೆ, ಈ ಪ್ರಯಾಣ ಸುಗಮ ಅನ್ನಬಾರದೆ? ಮಾತುಗಳನ್ನೆಲ್ಲ ಅದಾವ ತಿಜೋರಿಯಲ್ಲಿ ಬಚ್ಚಿಟ್ಟು ಕೀ ಕಳೆದು ಕೊಂಡೆ?ದೂರವಿದ್ದು ಹತ್ತಿರ ಇರುವ ಪರಿಪಾಠ (ಪಡಿಪಾಟಲು ಕೂಡ)ನಾನು ನೋಡಿದ್ದೇನೆ
ಹತ್ತಿರವಿದ್ದು ಅದೆಷ್ಟೋ ಮೈಲಿಗಳ ಅಂತರವನ್ನು ಅದೆಷ್ಟು ಸಲೀಸಾಗಿ ಸ್ಥಾಪಿಸಿದ್ದೀ ನೀನು?ನನಗೆ ಅಷ್ಟು ದೂರಾ ಹೊರಳಿ ನಡೆಯಲಾಗದು, ನೀರಿರದ ನದಿಯ ದಡದಲ್ಲಿ ನಿಂತ ಒಂಟಿ ನಾವೆಯಂತೆ ನಾನು ಕಾಯುತ್ತಲೇ ಇರುವೆ, ನಿನ್ನ ಆ ದಡಕ್ಕೆ ನನ್ನ ತಲುಪಿಸಲಿ ಅಂತ, ನಮ್ಮ ನಡುವಿನ ಅಂತರ ಕೊಚ್ಚಿ ಹೋಗುವ ಪ್ರೇಮ ಮಳೆಯೊಂದು ಬರಲಿ, ನಾನು ಕಾದು ಕಾದು ಸೋತಿದ್ದೇನೆ. ನಿನಗಾಗಿ, ನನ್ನ ಕ್ಷೀಣ ದನಿ ನಿನಗೆ ಈ ಬಾರಿಯಾದರೂ ಕೇಳಲಿ
ಒಮ್ಮೆ ಬಾರೋ ಒಮ್ಮೆ ಬಾರೋ
ಹೇಗೆ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರೂ
ಸುರಿ ಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜತೆಯಲಿ ನೆನೆಯಲು ನಲ್ಲನೆ ಮನಸಾಗಿದೆ, ಮನಸೋತಿದೆ.....
(copy paste)
(Devakanagile)

Friday, July 21, 2017

ಎರಡು ಕಣ್ಣುಗಳು

ಕಿಟಕಿ, ಪುಟ್ಟ ಕಿಟಕಿಯಲ್ಲಿ ಅದೆಷ್ಟು ವಿಶಾಲ ಬಾನು ತುರುಕಿಸಲಾದೀತು? ತೀರಾ ನೀಲಿ ಅಷ್ಟೇ ಕಾಣಿಸುವ ರಾತ್ರಿಯಲ್ಲಿ ದೂರ ತಾರೆಗಳು ಮಸುಕಾಗಿ ಹೊಳೆವಷ್ಟೇ ಜಾಗ, ಅದೇ ಹಸಿರು, ಅದೇ ಪಕ್ಕದ ಮನೆಯ ಕಿಟಕಿ ಅದೇ ವಾಹನಗಳ ಶಬ್ದ. ಹೊರ ನೆಟ್ಟ ಎರಡು ಕಣ್ಣುಗಳು ಮನೆಯಿಡೀ ಸುತ್ತಾಡಿ ಮತ್ತೆ ಬಂದು ಅದೇ ಕಿಟಕಿಯಲ್ಲಿ ಹಣುಕುತ್ತವೆ , ಹೊರಗಿನ  ಜಗತ್ತಿಗೆ ಮೈಯಾಗುತ್ತವೆ,ಮಧ್ಯಾಹ್ನ ೨ ಗಂಟೆಯ ತನಕ ಬೇರೆ ಕೆಲಸವೇ ಇಲ್ಲ ಅನ್ನುವ ಹಾಗೆ , ೨ ರ ನಂತರ ಗೇಟಿನ ಶಬ್ದ, ಕಣ್ಣಲ್ಲೊಂದು  ದೀಪ ಸೆರಗು ಹೊದ್ದು ಓಡಾಡುವುದು, ಆಗೀಗ ಸದ್ದು  ಕೇಳುವುದು , ಮತ್ತೆ ಸ್ವಲ್ಪ ಹೊತ್ತಿನ ನಂತರ ಹೊರಗೆ ಗೇಟಿನ ಶಬ್ದ, ಮತ್ತದೇ ಮೌನ, ನಾಲ್ಕು ಗಂಟೆಗೆ ಪಕ್ಕದ ಬಿಲ್ಡಿಂಗಿನಲ್ಲಿ ಗಲಾಟೆ, ಕಣ್ಣುಗಳು ಮತ್ತಷ್ಟು ದೂರ ಹಿಗ್ಗಿ ನೋಡಲು ಪ್ರಯತ್ನಿಸುತ್ತಿವೆ, ಹೌದು ಪಕ್ಕದ ಮನೆಗೆ  ಯಾವುದೋ ಬಾಡಿಗೆಯವರು ಬಂದಿರಬೇಕು. ಸ್ವಲ್ಪ ಹೊತ್ತಿಗೆಲ್ಲ ಸದ್ದು ಕಮ್ಮಿಯಾಗುವುದು , ಪಕ್ಕದ ಮನೆಯ ಕಿಟಕಿ ದೊಡ್ಡದಾಗಿ ತೆರೆಯುತ್ತಲಿದೆ, ಅಲ್ಲೆರಡು ಜೋಡಿ ಕಣ್ಣುಗಳು , ಬಹುಶಃ ಈ ಕಣ್ಣುಗಳಿಗೆ ಸಂಕೋಚವೇ, ಕಿಟಕಿ ತುಸು ಓರೆಯಾಯಿತು, ಮರುದಿನ ಒಂಬತ್ತಕ್ಕೆಲ್ಲ ಮತ್ತೆ ತೆರೆದ ಕಿಟಕಿ, ಮತ್ತದಕ್ಕೆ ಅಂಟಿದ ಕಣ್ಣುಗಳು , ಆ ಕಡೆಯ ಕಿಟಕಿಯಲ್ಲೂ ಎರಡು ಕಣ್ಣುಗಳು  ಆದರೆ ಇವತ್ತು ಚೂರು ಬಾನು ಕಣ್ಣಲ್ಲೂ ಮಿನುಗಿತ್ತಾ?  ನೀಲಿ ಕಣ್ಣುಗಳೆರಡೂ ದಿಟ್ಟಿಸುತ್ತವೆ, ಆ ಕಿಡಕಿಯಲ್ಲಿ ಕಣ್ಣು  ಅರಳುತ್ತದೆ, ದಿನ ಕಳೆದಂತೆಲ್ಲ ಅದೇನು ಸಂಭಾಷಣೆ , ಮೌನದಲ್ಲಿ ಕಳೆದು ಹೋಗುತ್ತಿದ್ದ ಮಧ್ಯಾಹ್ನಗಳಲ್ಲಿ ಈಗ ಸಂಗೀತ , ಕಣ್ಣುಗಳೋ ರಾತ್ರಿ ತಾರೆಗಳನ್ನು ಕದ್ದು ಕೆಡಗಿಕೊಂಡಂತೆ ಹೊಳೆಯುತ್ತವೆ, ನಿರೀಕ್ಷೆಯಲ್ಲಿ, ಬಹುಶಃ ಗಂಟೆಗಳು ನಿಮಿಷಗಳಾಗಿ.
ಬಹಳ ದಿನಗಳ ನಂತರ ಮತ್ತೆ ಕಿಟಕಿಯಲ್ಲಿ ಅವೇ ಎರಡು ಕಣ್ಣುಗಳು . ಪಕ್ಕದ ಮನೆಯ ಕಿಟಕಿಗಳು ಮುಚ್ಚಿವೆ ಹೊರಗೆಲ್ಲ  ಚೂರೇ ಚೂರು ಕಾಣಿಸುತ್ತಿದ್ದ ನೀಲಿ ಬಾನು, ರಾತ್ರಿಯ ಚುಕ್ಕಿ ಚಂದ್ರಮರು ಈಗ ಕಾಣಿಸುವುದಿಲ್ಲ, ಅಲ್ಲಿ  ಮತ್ತೊಂದು ಮಹಡಿ ಏಳುತ್ತಿದೆ. ಬರಿ ಧೂಳು , ಶಬ್ದ ಅಷ್ಟೇ, ಕಿಟಕಿಯಲ್ಲಿನ ಕಣ್ಣುಗಳು ಕಂಬನಿಯಲ್ಲಿ ತೊಳೆಯುತ್ತಿವೆ, ಧೂಳಿಗೋ ?

Monday, July 17, 2017

ಧಾರವಾಹಿ ಸುಗಂಧಿನಿ - ಭಾಗ ೩

ಯಮುನೆ ಹರಿಯುತ್ತಿದ್ದಳು ಇಕ್ಕೆಲಗಳನ್ನು ಬಾಚಿ ಬಾಚಿ ತಬ್ಬಿ , ಒಮ್ಮೊಮ್ಮೆ ಮುನಿಸು ಹೊತ್ತಿನಲ್ಲಿ ಪುಂಡಾಟ ಮಾಡುವ ಮಗು, ಒಮ್ಮೊಮ್ಮೆ ಸರಳ ಸುಂದರಿ, ಒಮ್ಮೊಮ್ಮೆ ತೀರಾ ಯಾರಿಗೋ ಕಾದು  ಬೇಸತ್ತವಳಂತೆ, ವೈರಾಗಿಯೊಮ್ಮೊಮ್ಮೆ, ಒಮ್ಮೊಮ್ಮೆ ಮೋಹಿನಿ, ನದಿಯೆಂದರೆ ಯಮುನೆ, ನನ್ನೆದೆಯೊಳಗೂ ಅವಳು ಹರಿಯುತ್ತಿದ್ದಳು, ತಬ್ಬಲಿತನವನ್ನು ಸಂತೈಸಿ, ಸದಾ ನಾನಿಲ್ಲವೆ ಎನ್ನುವಳು, ನನ್ನ ಭಾವದ ಹರಿವು  ಅವಳ ನೀರ  ಹರಿವು ಎರಡೂ  ನೀರಸ ಬದುಕಿಗೆ ಆಗಾಗ ರಂಗು ತುಂಬುವ ಸುತ್ತಲ ಹಸಿರನ್ನ ನೋಡುತ್ತಾ ಕಳೆಯುತ್ತಲಿತ್ತು, ಕೈಯಿಟ್ಟರೆ ಸಾಕು ತಣ್ಣಗೆ ಕೊರೆವ ನೀರು, ಕಾಳಿಂದಿಯಲ್ಲಿ ಅಮೃತಪಾನವಾಗಿ ಬದಲಾಗುವ ಪರಿಗೆ ನಾನು ಆಶ್ಚರ್ಯ ಪಟ್ಟಿದ್ದುಂಟು ಬಹಳ ಸಲ  , ನನಗೆ ನೆನಪೇ ಇದೆ, ಚಿಕ್ಕವಳಿದ್ದಾಗ ಇದೆ ದಡದಗುಂಟ ಅಜಮಾಸು ನೂರು ಯೋಜನ  ಒಂದು ವಾರ ನಡೆದು ಅಲ್ಲಿ ಹಳ್ಳಿಯಲ್ಲಿ ತಂಗಿದ್ದೆವು ಅದನ್ನು ತಂದೆ "ವೃಂದಾವನ" ಅಂತ ಪರಿಚಯಿಸಿಕೊಟ್ಟಿದ್ದರು, ಅಲ್ಲಿಯ ಮಣ್ಣು ಹೂ ಹಣ್ಣು ಗೋಧಿಗೆ ಹೇಳಿ ಮಾಡಿಸಿದಂತಿತ್ತು , ಮಕ್ಕಳು ಬಲು ಚೂಟಿಯಾಗಿದ್ದರು , ಎಲ್ಲಕ್ಕಿಂತ ನನಗೆ ಆಗ ಬೆನ್ನು ಗೊತ್ತಾಗದಷ್ಟು ಚೂರು ಬಾಗಿತ್ತು , ಕಾಲೂ ,ಅಷ್ಟೇ, ಸುಮತಿ ಸುಗಣ್ಯ  ರಮಣಿ ಮುಂತಾದ ಮಕ್ಕಳೊಂದಿಗೆ ತಾನು ಕಳೆದ ಆ ದಿನಗಳು ಇವತ್ತಿಗೂ ನೆನಪಿದೆ, ಅಲ್ಲಿಯ ಯಮುನೆ ಇಲ್ಲಿಯವಳಲ್ಲ ಅಂತ ಬಹಳ ಸರಿ ಅನಿಸಿದ್ದಿದೆ, ಬೆಟ್ಟ ಬಯಲು ಎರಡು ಸಮ್ಮಾನವಾಗಿ ಹಂಚಿ ಹರಿಯುತ್ತಿದ್ದ ಆ ಪ್ರದೇಶ ಕೂಡ ನಂದನ ವಂಶಸ್ಥರಿಗೆ ಸೇರಿದ್ದು ಅಂತ ತಂದೆ ಯಾವಾಗಲೂ ಕಥೆ ಹೇಳುತ್ತಿದ್ದರು.
ತಟದಲ್ಲಿ ನಿಂತು ಹಣೆಯ ಮೇಲೆ ಕೈ ಇತ್ತು ದೂರದೆಡೆಗೆ ಕಣ್ಣು ಹಾಯಿಸಿದೆ , ಸುಶೇಷಣ ತನ್ನ ದೋಣಿಯನ್ನು ದಡದಲ್ಲಿದ್ದ ಮಾಮರಕ್ಕೆ ಕಟ್ಟಿ ಮಾಯವಾಗಿದ್ದ, ಬಹುಶಃ ನಿನ್ನೆ ಬಹಳ ದಣಿದಿದ್ದನೇನೋ ಎದ್ದಿರಲಿಲ್ಲ, ಉಳಿದ ಮೀನುಗಾರರು ಯಮುನೆಯ ಆ ತುದಿಯಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು . ಆ ದಡ ತಲುಪಿಸಲು ಯಾವ ಮಾಯಾವಿ ಬಂದಾನು? ಆದರೆ ನನಗೆ ಅಲ್ಲಿಗೆ ತಲುಪಲೇ ಬೇಕಿತ್ತು. ಅದೂ  ಬಹಳ ತುರ್ತಾಗಿ ರಾಣಿ ರೋಹಿಣಿಯ ಸಂದೇಶ ಹೊತ್ತು , ತಾಯಿ ದೇವಕಿಯನ್ನು ನೋಡಲು, ಮತ್ತೆ ಮೈಯೆಲ್ಲಾ ಪುಳಕಿಸಿತು,ಕೈಯಲ್ಲಿದ್ದ ಗಂಧ ಚಂದನದ ಪೆಟ್ಟಿಗೆ, ಜತೆಗೆ ರಾಣೀವಾಸದವರು ನೀಡಿದ್ದ ಪುಟ್ಟ ಬುಟ್ಟಿ , ಕೈಗಳು ನೋಯಲಾರಂಭಿಸಿತ್ತು
ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ದೋಣಿ ಇತ್ತ ಬರುತ್ತಿರುವಂತೆ ಕಾಣಿಸಿತು, ಓ ಅದು ಸೈನಿಕರ ದೋಣಿ ಅವರಿಗೆ ಇಲ್ಲೇನು ರಾಜಕಾರ್ಯ, ನನಗರ್ಥವಾಗಲಿಲ್ಲ, ಉಗ್ರಸೇನ ಮಥುರೆಯ ಪಟ್ಟದಲ್ಲಿದ್ದಾಗ ನಂದನನ್ನು ಮತ್ತು ನಂದನ ತಂದೆಯನ್ನು ಪ್ರಾಣಕ್ಕೆ ಸ್ನೇಹಿತರಂತೆ ನೋಡಿದ್ದ, ಆದರೆ ಅವನ ಇದ್ದೊಬ್ಬ ಮಗ ರಾಜ್ಯದ ಮಾನವನ್ನು ಸೂರೆಗೈಯತೊಡಗಿದ, ಸಾಲದು ಅಂತ ತಂದೆಯನ್ನು ಪಟ್ಟದಿಂದ ಕೆಳಗಿಳಿಸಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ, ತಂದೆಯ ಸಲಹೆಗಳಿಗೆ ಕಿವಿಗೊಡದೆ, ರಾಜ್ಯದ ಸಾಮಂತರಿಗೆ ಕೊಡಲಾಗುತ್ತಿದ್ದ ಗೌರವ ಮತ್ತು ಮರ್ಯಾದೆ ಕಿತ್ತೆಸೆದು ತೆರಿಗೆ ಮತ್ತು ದಂಡಗಳನ್ನು ಹೆಚ್ಚಿಸಿದ. ಅವನ ಮಾತು ಕೆಳದವರನ್ನು ಮೂಲೆಗೊತ್ತಿದ, ಅಂತೆಲ್ಲಾ ಹಲವಾರು ಕಥೆಗಳು ಆ ದಡದಿಂದ ತೇಲಿ ಬರುತ್ತಿದ್ದವು , ನಾನು ರಾಜಕಾರಣ ಅರಿತವಳಲ್ಲ, ಆದರೂ ನಮ್ಮ ವ್ರಜ ಭೂಮಿಗೆ ಯಾವತ್ತೂ ಕೆಟ್ಟದ್ದು ತಡೆದುಕೊಳ್ಳುವ ಶಕ್ತಿ  ಇರಲಿಲ್ಲ, ಅದು ನಂದ ರಾಜನಂತೂ ರಿಷಿ ಸಮಾನ ರಾಜ, ಆಚಾರ ವಿಚಾರದಲ್ಲಾಗಲಿ ಅವನು ಯಾರನ್ನು ನೋಯಿಸಿದ್ದೆ ಇಲ್ಲ, ಮಕ್ಕಳಿಂದ ವೃದ್ಧರವರೆಗೆ ಅದೇ ಆದರೆ ಅದೇ ಪ್ರೀತಿ, ಅಷ್ಟು ಸಮ ತೂಗುವ ಅವನ ಪ್ರಾಮಾಣಿಕತೆಯನ್ನು ಇತ್ತೀಚಿಗೆ ಕಂಸ ಪ್ರಶ್ನಿಸಲಾರಂಭಿಸಿದ್ದ , ಕಂಸ ನಂದನನ್ನು ಬಲ್ಲದಿದ್ದವನೇನಲ್ಲ , ವಸುದೇವ ನಂದ  ಕಂಸ ಮೂವರ ಗೆಳೆತನ ಹಳೆಯದ್ದೇ, ಯಾವತ್ತೋ ಒಮ್ಮೆ ವಾಸುದೇವ ಕುಂತಿಯನ್ನು ಕಂಸನಿಗೆ ಕೊಟ್ಟು  ವಿವಾಹ ನೆರವೇರಿಸಬೇಕೆಂದುಕೊಂಡಿದ್ದನಂತೆ, ಅವನೋ ಕುಂತಲ ರಾಜ್ಯದ ರಾಜಕುಮಾರನಾದರೂ  ಕಂಸನ ಮೇಲೆ ಅತಿಯಾದ ವಿಶ್ವಾಸ, ಅದೆಲ್ಲವೂ ಈಗ ಮರೆತ ಕಥೆ.

ದೂರದಲ್ಲಿದ್ದ ದೋಣಿ ಹತ್ತಿರಕ್ಕೆ ಬಂದಿತ್ತು , ಅದು ಎರಡೆರಡು ಸೈನಿಕರನ್ನು ಹೊತ್ತು ತಂದಿತ್ತು ಒಬ್ಬ ಕಾಂಗದ , ಮತ್ತೊಬ್ಬ ನಿರೂಪ ಇಬ್ಬರು ಇದು ಎರಡನೇ ಸಲ ಬರುತ್ತಿರುವುದು, ಪಾಪ ಅವರೇನು ಮಾಡಿಯಾರು, ಜೀವಂತ ಇರಬೇಕಾದರೆ  ರಾಜ ಹೇಳಿದ ಕೆಲಸ ಮಾಡಲೇಬೇಕು, ನನ್ನೆದೆಯಲ್ಲಿ ಯಾಕೋ ಅವರಿಗಾಗಿ ತುಸು  ಆರ್ದ್ರ ಭಾವವೊಂದು ಅವತ್ತೇ ಹುಟ್ಟಿತ್ತು, ಹಾಗೆಯೇ ನಂದರಾಜರ ಬಗ್ಯೆ ಕಾಳಜಿಯೂ, ದಡಕ್ಕೆ ದೋಣಿ ಕಟ್ಟಿ ಇಬ್ಬರೂ  ಕಟ್ಟಿ ಹಿಡಿದು ಇಳಿದರು , ನನ್ನ ನೋಡುತ್ತಲೇ ಪರಿಚಿತ ಭಾವವೊಂದು ನಗೆಯಲ್ಲಿ ಕೊನೆಯಾಯಿತು, "ತ್ರಿವಕ್ರೆ, ನಂದರಾಜರು ಲಭ್ಯವಿರುವರೇನು? ನಾವು ಬಂದ  ವಿಷಯ ಅವರಿಗೆ ತಿಳಿಸಬೇಕಿತ್ತು" ಸಣ್ಣದಾದ ನಡುಕವೊಂದು ನನ್ನೇ ಆವರಿಸಿತು, ತಕ್ಷಣ ಎಚ್ಚೆತ್ತು ನುಡಿದೆ"ನನಗೆ ತಿಳಿಯದು, ನೀವು ಅರಮನೆಯ ಹತ್ತಿರ ಹೋಗಿ ಕೇಳಬೇಕು" "ನೀನು ದೋಣಿಗಾಗಿ ಕಾಯುತ್ತಿರುವೆಯಾ ಸಹೋದರಿ, ನಮ್ಮ ವಿಶಂಕು ನಿನ್ನ ಆ ದಡಕ್ಕೆ ತಲುಪಿಸಿ ಬರುವ, ಸರಿಯೆನು?" ನಿರೂಪನ  ದನಿ, ಅದರಲ್ಲಿದ್ದ ನಿಜ ಕಾಳಜಿಗೆ ಕರಗಿದೆ ನಾನು, ನನ್ನ ಯೋಗ್ಯತೆಯನ್ನು ಅರ್ಹತೆಯನ್ನು ಕೇವಲ ನನ್ನ ರೂಪದಿಂದಲೇ ಅಳೆವವರ ಮಧ್ಯೆ ನನಗೆ ಗೌರವಿಸಿ ಅರ್ಥೈಸಿಕೊಳ್ಳುವವರು ಬಹಳೇ ಕಮ್ಮಿ. ಮರು ಮಾತಾಡದೆ ದೋಣಿ ಹತ್ತಿ ಕುಳಿತೆ. ದೋಣಿ ಸಾಗಿತು ಯಮುನೆಯ ನೊರೆ ನೊರೆ ತೆರೆ ಸೀಳುತ್ತ.
(ಮುಂದುವರೆಯುವುದು)

Thursday, July 13, 2017

ಅವನಿಗೆ


ಅವನಿಗೆ ,
ಕೇಳು
ತಣ್ಣನೆಯ ನೀರು ತಲೆಯ ಮೇಲೆ ಬೀಳುತ್ತಿತ್ತು, ಯಾವುದೋ ಜನುಮದ ಪಾಪ ತೊಳೆಯುವಂತೆ ಕಣ್ಣಿಂದ ಜಾರಿದ ಹನಿಯೊಂದು ನೀರ ಜತೆ ಸೇರಿ ಹರಿದು ಹೋಯಿತು ಅದೆಷ್ಟು ಕಣ್ಣ ಹನಿಗಳು ಸೇರಿ ಸಾಗರ ಉಪ್ಪಾಯಿತು? ನಾನು ಕಣ್ಣೊರಸಿ ಬಿಕ್ಕು ತಡೆ ಹಿಡಿದೆ. ಕಾರಣವೇ ಇಲ್ಲದೆ ಬರುವ ಕಣ್ಣೀರು ಒಂದೋ ಸುಖದ್ದು ಕೃತಜ್ಞತೆಯದ್ದು ಮತ್ತೊಂದು ಬಹುಶಃ , ಗತ ಕಾಲದ ನೆನಪುಗಳದ್ದು ಕಹಿಯಾದ್ದು. ನನ್ನ ಕಣ್ಣಿನ ಹನಿ ಅವೆರಡಕ್ಕೂ ಸೇರಿದ್ದಾಗಿರಲಿಲ್ಲ, ನೀರು ಹಿಡಿದಿಟ್ಟ ಮೋಡ ನಾನು , ಸಣ್ಣದ್ದನ್ನು ಸಹಿಸದ ಸೂಕ್ಷ್ಮ ಮನಸ್ಥಿತಿ ಹಾಗಿದ್ದರೆ ಒಳ್ಳೆಯದಿತ್ತೇನೋ , ಆದರೆ ಎಲ್ಲ ಬದಲಾಯಿತು

ಪೂಜೆ  ಮುಗಿಸಿ ಕೂತಾಗ ಏನೋ ಮರೆತಂತನಿಸಿ  ಕ್ಯಾಲೆಂಡರ್ ನೋಡಿದೆ, ಜುಲೈ ಹದಿಮೂರು ಅಂತ ತೋರಿಸುತ್ತಿತ್ತು ತಟ್ಟನೆ ನೆನಪಾಯಿತು ಇವತ್ತು ಅವನ ಜನ್ಮದಿನ , ಒಂದು ಸಣ್ಣ ಸೆಳಕು ಎದೆಯಲ್ಲಿ, ವಾಟ್ಸಾಪಿನಲ್ಲಿ ನೋಡಿದೆ ನನ್ನ ಶುಭೋದಯಕ್ಕೆ ನಿತ್ಯ ಬರುತ್ತಿದ್ದ ಉತ್ತರವಿಲ್ಲ, ಅವನ ಸಣ್ಣ ಮುನಿಸಿಗೆ ಕಾರಣ ನನಗೆ ಗೊತ್ತಿಲ್ಲದ್ದೇನು ಅಲ್ಲ, ಆದರೆ ನಾನು ಸಂಸಾರದ ನೂರು ಬಳ್ಳಿಗಳಲ್ಲಿ ಬಂಧಿತಳು , ಸೆರಗಲ್ಲಿ ಕೆಂಡದಂತ ಬದುಕನ್ನು ಕಟ್ಟಿಕೊಂಡು ನಿತ್ಯ ಒದ್ದಾಡುತ್ತಿರುವವಳು ಯಾವತ್ತೋ ಅದನ್ನು ಕಿತ್ತು ಓಡಿಹೋಗುತ್ತೇನೆ ಎನ್ನುವ ಹುಚ್ಚು ಭರವಸೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮೋಹವನ್ನು ಮಮತೆಯನ್ನು ಬಟ್ಟೆಯಾಗಿ ಸುತ್ತಿಕೊಂಡವಳು , ಮನಸ್ಸೇನೋ ಸದಾ ಸಂಚಾರಿ ಆದರೆ ನಿತ್ಯ ಕೆಲಸಕ್ಕೆ ಅದನ್ನ ಕಟ್ಟಿ ಹಾಕಲೇ ಬೇಕಲ್ಲ, ಬೇಕೆಂದಾಗ ಬೇಕೆನಿಸಿದವರನ್ನ ನೋಡುವ ಅವಕಾಶ ಅದೆಷ್ಟು ಜನಕ್ಕೆ ಸಿಕ್ಕೀತು ನಾನಂತು ಹುಟ್ಟಾ ಪಾಪಿ ಕಾಲಿಟ್ಟ ಕಡೆ ಮುಳ್ಳು ಮನಸ್ಸಿನ ಹೃದಯಗಳು ಹೂಗಳ ಮುಖವಾಡ ಹಾಕಿ ಚುಚ್ಚುವಾಗಲು ಸಹಿಸಿ ನಾಳೆ ಎನ್ನುವ ಆಶಾವಾದಕ್ಕೆ ಜೋತು  ಬಿದ್ದವಳು ಆದರೆ ಗಂಡು ಎನ್ನುವ ಪ್ರಭೇದದ ಬದುಕು ಈ ಭೂಮಿಯಲ್ಲಿ ಬಹಳ ಸುಲಭವಿದೆ, ಇಷ್ಟೆಲ್ಲಾ ಕಷ್ಟ ಪಡಬೇಕಿಲ್ಲ ಅಲ್ಲವೇ, ಬಹುತೇಕ ಎಲ್ಲ ಸಾರವಜನಿಕ ಮತ್ತು ಖಾಸಗಿ ಜಾಗಗಳಲ್ಲಿ ಜಗತ್ತು ಹೇಗಿದ್ದರೂ ಗಂಡು ಎನ್ನುವ ಪಟ್ಟ ಕಟ್ಟಿ ವಿನಾಯತಿ ಕೊಟ್ಟುಬಿಡುತ್ತದೆ
ನಾನು ಯೋಚನೆಗಳಲ್ಲಿ ಕಳೆದು ಹೋಗಿದ್ದೆ, ನನ್ನ ಮನಸ್ಸು ಮಾತ್ರ ನೋಡ ಬಯಸುತ್ತಿತ್ತು,  ಅವನನ್ನ,ಆದರೆ ನಾನು ನೋಡ ಬಯಸಿದ್ದ ಅವನು ಅವನಾಗೆ ಉಳಿದಿರಲಿಲ್ಲ, ಸುಮ್ಮನೆ ಮುನಿಸು, ನಮ್ಮ ಬದಲಾದ ಬದುಕುಗಳ ಜತೆ ಜತೆಗೆ ಬದಲಾದ ಪ್ರಾಮುಖ್ಯತೆಗಳನ್ನ ಅರ್ಥೈಸದೆ ಹಳೆಯ ನೆನಪುಗಳಿಗೆ ಅದು ಕೊಡುವ ನೋವುಗಳಿಗೆ ನಾನೇ ಕಾರಣ ಅನ್ನುವ ಮಾತು ನನ್ನ ಚುಚ್ಚಿ ನೋಯಿಸುವುದು, ನನಗೆ ನಿಜವೆಂದರೆ ಈ ಜಗತ್ತಿನಲ್ಲಿ ಯಾರು ಬೇಕಿಲ್ಲ, ನೀನೊಬ್ಬ ಸಾಕು ಎನ್ನುವ ನನ್ನ ಮನಸ್ಥಿತಿಯನ್ನ ಮುಚ್ಚಿಡಲು ಪ್ರತಿಬಾರಿಯೂ ಪ್ರಯತ್ನಿಸಿ ಸೋತಿದ್ದೇನೆ,ಮತ್ತೆ ಮತ್ತೆ ಬದಲಾಗುವ ಪರಿಸ್ಥಿತಿಗಳ ನಡುವೆಯೂ ನೀನೊಬ್ಬ ಮಾತ್ರ ಬದಲಾಗದ ಅದೇ ಸ್ಥಾನದಲ್ಲಿ ಹೃದಯದಲ್ಲಿ ಕೂತಿದ್ದೀಯಾ ಎನ್ನಲು ಪ್ರಯತ್ನಿಸಿ ಸೋತಿದ್ದೇನೆ ಕೊನೆಗೆ ಇದೆಲ್ಲವೂ ಹನಂಬಿಕೆ ಇಲ್ಲದ ಅವನಲ್ಲಿ ಹೇಳುವದಕ್ಕಿಂತ ಮೌನಿಯಾಗಿರುವುದೇ ಲೇಸು ಅನ್ನಿಸಿ ಮೌನವು ಆಗಿಬಿಟ್ಟಿದ್ದೇನೆ,
ನದಿ ತನ್ನ ಪಾತ್ರಗಳನ್ನು ಸದಾ ಬದಲಿಸಬೇಕಾಗುತ್ತದೆ,ಭೂಮಿಯ ಏರಿಳತಗಳಿಗೆ ತಕ್ಕಂತೆ ಆದರೆ ಕೊನೆಯ ತನಕವೂ ದಡಗಳೆರಡೂ ನದಿಯೊಡನೆ ಮೌನವಾಗಿ ಪಯಣಿಸುತ್ತದೆ, ನೋವಿನಲ್ಲಿ ನಲಿವಿನಲ್ಲಿ ಅದೇ ತಬ್ಬುಗೆಯಲ್ಲಿ ಸಂತೈಸುತ್ತಾ ಸಾಗರನ ಒಡಲು  ಸೇರುವವರೆಗೂ , ಆ ಮಹಾಯಾತ್ರೆಯಲ್ಲಿ  ನದಿಗೆ ಈ ಸಾಂಗತ್ಯ ಕೊಡುವ ಆತ್ಮಬಲ ಬಣ್ಣಿಸಲಾಗದ್ದು, ನನ್ನ ಚಂದ್ರಮ ಹಾಗೆಯೆ , ಅವನು ಜತೆಗಿರಲಿ ಇಲ್ಲದಿರಲಿ, ಮುನಿಸಿರಲಿ ಸೊಗವಿರಲಿ ಅವನಿರದೆ ಈ ಬದುಕೆಂಬ ನದಿಗೆ ಯಾವದಡಗಳಿಲ್ಲ ನಾನೆಲ್ಲಿ ಹೋದರು ಅವನ ನೆನಪಿನ ಬಾಹುಗಳು ಕಾಳಜಿಯ ಕಣ್ಣುಗಳು ಸದಾ ನನ್ನ ಜತೆಗಿರುತ್ತವೆ, ಜೀವವೊಂದು ಮತ್ತೊಂದು ಜೀವಕ್ಕೆ ದೇಹದ ಅರಿವಿಲ್ಲದೆ ಅಂಟಿಕೊಂಡ ಹಾಗೇ
ಅ ವನೇ, ನಾನು ಉರಿಯುತ್ತಿರುತ್ತೇನೆ , ನಿನ್ನ ಅದೃಶ್ಯ ಸಹಾಯದೊಂದಿಗೆ, ನಿನ್ನ ಮುನಿಸು ಕರಗಲಿ, ಮತ್ತದೇ ಬೆಚ್ಚನೆಯ ಪುಳಕ ಇಬ್ಬರ ಹಾದಿಯಲ್ಲಿ ಚೆಲ್ಲಿಕೊಳ್ಳಲಿ, ನಿನ್ನ ಅರೋಗ್ಯ ನಗು ನನಗಾಗಿಯಾದರೂ  ಸದಾ ನಳನಳಿಸುತ್ತಿರಲಿ
ನಿತ್ಯವೂ ಹುಟ್ಟಿದ ಹಬ್ಬವಾಲಿ
ಇಂತಿ ನಿನ್ನವಳಾಗದ ನಿನ್ನವಳು ಇವಳು