Wednesday, June 29, 2016

ಅವಳೆಂಬ ಮಾಯೆ

"ಬೀಪ್" ಮೆಸೇಜ್ ಬಂದ ಸದ್ದು, ಹ್ಮ್ ಇವತ್ತು ಎಂಟನೆಯ ತಾರೀಖು, ಮನೆಗೆ ಮಾಡಿದ ಸಾಲ ಬ್ಯಾಂಕ್ ಸೇರಿದ್ದು, ಇದೊಂದಾದರೆ ಕೈಯಲ್ಲಿ ಬರೋಬ್ಬರಿ ಐವತ್ತು ಸಾವಿರ ಉಳಿತಾಯ, ವೀಕೆಂಡು ಅದೂ ಇದೂ ಶಾಪಿಂಗ್ ಮಾಡಿದರೂ ಹತ್ತು ಸಾವಿರ ಖರ್ಚಾಗಲಿಕ್ಕಿಲ್ಲ, ಮನೆಯ ಖರ್ಚೆಲ್ಲ ಅವಳ ಸಂಪಾದನೆಯಲ್ಲಿ, ತನಗೇನೂ ಭಾರೀ ಆಸೆಯಿಲ್ಲ, ಅವಳಿಗೆ ಊರು ಸುತ್ತುವ ಆಸೆ ಅದೂ ಐಷಾರಾಮಿಯಾಗಿ, ಅದಕ್ಕಾಗಿ ಉಳಿಸುತ್ತಾಳೆ,

"ನೀನೂ ಉಳಿಸು, ಉಳಿಸುವ ಹೆಂಡತಿ ಉಳಿಸುವ ಮಕ್ಕಳು ಮತ್ತು ಉಳಿಸುವ ನೀನು, ಸುಂದರ ಸುಖೀ ಸಂಸಾರ, ವಾರಕ್ಕೊಮ್ಮೆ ಸಿನೆಮಾ, ಶಾಪಿಂಗು ಇಲ್ಲ ಹತ್ತಿರದಲ್ಲಿರುವ ಯಾವುದೋ ದೇವಸ್ಥಾನ, ಪಾರ್ಕ್, ವರ್ಷಕ್ಕೊಮ್ಮೆ ವಿದೇಶ, ಬೀರುವಿನಲ್ಲಿ ಇಡಲು ಆಭರಣಗಳು ಮತ್ತು ಕಾಣೆಯಾದ ನೆಮ್ಮದಿ" ಅವಳ ಖಿಲ ಖಿಲ ನಗು ಎದೆಯಲ್ಲಿ ಚುಚ್ಚಿ  ತಲೆಯಲ್ಲೊಮ್ಮೆ ಕೈಯಾಡಿಸಿಕೊಂಡೆ,ಅವಳ ನೆನಪಾದಾಗೆಲ್ಲ ಒಂಥರದ ಸೆಳಕು ಎದೆಯಲ್ಲಿ, ಆ ಸೆಳೆತ, ಆ ಮಾದಕ ನೋಟ, ಅಬ್ಬ ಗಟ್ಟಿ ಗುಂಡಿಗೆಯ ಹೆಣ್ಣು, ಅವಳು ಇಷ್ಟಪಟ್ಟಿದ್ದಳು, ನಾನೂ, ಮದುವೆಯಾಗುವಾ ಅಂದೆ, ಮದುವೆಯಾದರೆ? ಅಂತ ಮರುಪ್ರಶ್ನೆ, ಅದಕ್ಕೆ ತಾನೇ ನಾಚಿ ತಲೆ ತಗ್ಗಿಸಿದ್ದೆ, ಅರ್ದ ಗಂಟೆ ಜೋರಾಗಿ ನಕ್ಕು ನಂತರ "ನೀನು ಒಳ್ಳೆಯ ಹುಡುಗ, ನಿನಗೆ ಒಳ್ಳೆಯ ಹುಡುಗಿ ಸಿಗಲಿ"
ತನ್ನದು ಅವಳೇ ಬೇಕೆಂಬ ಹಟ, ತೋರುಬೆರಳಲ್ಲಿ ಕ್ಷಿತಿಜಕ್ಕೆ ಕೈ ಮಾಡಿ ತೋರಿದ್ದಳು, ನೋಡು, ನಾನು ಹೇಗಿದ್ದೀನಿ ಹಾಗೆ ಒಪ್ಪತೀಯಾ? ನಿಮ್ಮ ಸಮಾಜ ನನ್ನ ಒಪ್ಪುತ್ತದಾ? ಅಪ್ಪ ಅಮ್ಮ? ನಾನು ಸ್ವತಂತ್ರ ಬದುಕಿದವಳು, ಆ ಖುಷಿಯನ್ನ ಕಳೆಯದೆ ನಾನು ನಿನ್ನ ಹೆಂಡತಿಯಾಗಿ ಇರಬಹುದಾ? ಯೋಚಿಸು, ಇದು ನಿನ್ನ ನಿರ್ಧಾರ, ಅಷ್ಟಕ್ಕು ಈ ಸಂಬಂಧಕ್ಕೆ ಮದುವೆಯೆ ಕೊನೆ ಅಂತ ಏನಿದೆ? ಸ್ನೇಹ ಪ್ರೀತಿ ಇವೆಲ್ಲ ತೀವ್ರ ಭಾವನೆಗಳು, ಕೊಚ್ಚಿಹೋಗಬೇಡ, "  ಆಕೆಯ ಪ್ರಾಮಾಣಿಕತೆ ದಿಗಿಲು ಹುಟ್ಟಿಸುತ್ತಿತ್ತು,ಅವಳ ಸ್ನೇಹಿತರು , ಸ್ವಚ್ಛಂದ ಹಕ್ಕಿಯಂತೆ ಸದಾ ಲವಲವಿಕೆಯ ಮನಸ್ಸು , ಸುತ್ತ ಇರುತ್ತಲಿದ್ದ ಹುಡುಗರ ಹಿಂಡು ಅವರ ಆರಾಧನೆಯ ನೋಟಗಳು,
ತಾನು ದೂರಾಗುವ ಮುಂಚೆ ಇರಬೇಕು, ಮನೆಗೊಂದು ಹುಡುಗರು ಓಡಿಸುವ ದೊಡ್ಡ ಬೈಕು ತಂದಿದ್ದಳು, ನಾಲ್ಕೆ ದಿನದಲ್ಲಿ ಕಲಿತು ಅದೆಲ್ಲಿಗೋ ಟ್ರಿಪ್ ಹೋಗಿ ಬಂದವಳ ಜತೆ ಅದಾವುದೋ ಹುಡುಗನನ್ನು ಕರೆ ತಂದಿದ್ದಳು, ಅವನ ಜತೆ ಮದುವೆಯಾಗುವುದಿಲ್ಲ   ಆದರೆ ಅವನು ತನ್ನ ಬಿಸಿನೆಸ್ ಗೆ ಹೆಲ್ಪ್ ಮಾಡುತ್ತಾನೆಂದು ಹೇಳಿದ್ದಳಲ್ಲ, ತನಗೆ ಇದ್ದ ಒಂದು ನಿರೀಕ್ಷೆ ಕಳಚಿಕೊಂಡಿತ್ತು, ಹೋಗುತ್ತೇನೆ ಅಂದಾಗ ಆಕೆ ಹೇಳಿದ್ದು ಈಗಲು ಕಿವಿಯಲ್ಲಿಯೆ ಇದೆ" ಹೋಗ್ತೀನಿ ಅನ್ಬೇಡ, ಹಾಗೆ ಹೋಗೋದು ಬರೋದು ಇರೋದೆಲ್ಲ ಸಾಂಕೇತಿಕ ಮಾತ್ರ, ಅಲ್ಲ ಮಾರಾಯ ಭೂಮಿ ಗುಂಡಗಿದೆ ಅಂತ ಕೇಳಿಲ್ವಾ, ಜತೆಗೆ ಇರ್ತೀನಿ ಹೋಗು" ಅವಳ ಆತ್ಮವಿಶ್ವಾಸ , ಹೆಗಲ ಮೇಲೆ ಕೈ ಹಾಕಿ ಸಮಾಧಾನಿಸಿದ ಕ್ಷಣಗಳನ್ನೆಲ್ಲ ಹೊತ್ತು ಬದುಕು ಶುರು ಮಾಡಿದ್ದೆ,
ಅದೇ ಹೆಂಡತಿ ಮಕ್ಕಳು, ಹಾಹಾ ನಗು ಬಂತು, ಮೊನ್ನೆ ಟೀವಿಯಲ್ಲಿ ಅವಳನ್ನು ನೋಡಿದಾಗ ನಂಬಿಕೆಯೆ ಬರಲಿಲ್ಲ ಹಾಗೆಯೆ ಇದ್ದಳು, ಮುಖದ ಮೇಲಿನ ಮುಗುಳ್ನಗು,ಅದೇ ಪ್ರಭಾವಲಯ ಅದೇ ಮಾದಕತೆ, ಮತ್ತಷ್ಟು ದೃಢ ಧ್ವನಿ, ಬೆಟ್ಟ ಹತ್ತುವ ತರಬೇತಿಯನ್ನು ಕಲಿಸುತ್ತಿದ್ದಳು, ಅವಳನ್ನೊಮ್ಮೆ ಭೇಟಿಯಾಗಲೆ ಅಂದುಕೊಂಡವನು ಮತ್ತೆ ಸುಮ್ಮನಾದೆ, ಹೌದು ಅವಳು ಎಲ್ಲರಂತಲ್ಲ ಅಥವಾ ನಾನು ಸಾಮಾನ್ಯ, ಅತೀ ಸಾಮಾನ್ಯ, ಭೆಟ್ಟಿಯಿಂದ ಬದುಕು ಬಹಳ ಬದಲೇನೂ ಆಗಲಾರದು ಅನ್ನಿಸತೊಡಗಿತು, ಬ್ಯಾಂಕಿನಿಂದ ಬಂದ ಮೆಸೇಜು ನೋಡಿ ಉಳಿದ ಹಣದಲ್ಲಿ ಮಗದೊಂದು ಸೈಟು ನೋಡಲು ನಮ್ಮ ರಿಯಲ್ ಎಸ್ಟೇಟ್ ಏಜೆಂಟನಿಗೆ ಫೋನಾಯಿಸಿದೆ.ಅವನು ಅದಾವುದೋ ವೆಬ್ ಸೈಟಿನಲ್ಲಿ ನೋಂದಾಯಿಸಿದ್ದೇನೆ ಎಂದೂ, ಮೆಸೇಜಿನಲ್ಲಿಯೆ ಎಲ್ಲ ವಿವರಗಳು ಬರುತ್ತದೆಂದು ಹೇಳಿದ,  ಅವಳು ನಿಧಾನಕ್ಕೆ ಬರಲು ಶುರುವಾದ ಮೆಸೇಜ್ ಗಳ ಬೀಪ್ ಸದ್ದಿನಲ್ಲಿ ಮರೆಯಾದಳು.