Saturday, January 4, 2014

ಪ್ರೇಮ ನಾದ ಮತ್ತು ಬೆಳಕು(ಕಾವ್ಯ ಗುಚ್ಛ)

 ನಾದ -೧

ತೂಗುವ ಸಮಯದ ತೂಗುಯ್ಯಾಲೆ
ಇತ್ತಿಂದತ್ತ ಅತ್ತಿಂದಿತ್ತ ತೂಗದೆ ನಿಂತ ಹಾಗಿದೆ!!

ನಿನ್ನ ನನ್ನ ಕಾಣದ ಈ ದ್ವೀಪದ ದಡ ಸೇರಿಸಿದ
ದೋಣಿ ಇಲ್ಲೆ ಇದೆ
ಅಂಬಿಗ ಎಲ್ಲೋ ಕಳೆದು ಹೋಗಿದ್ದಾನೆ
ಹುಡುಕುವ ದರ್ದು ನಮಗೂ ಇಲ್ಲ

ನಿನ್ನೆದೆಯ ಮೇಲಿನ ಅಷ್ಟೂ ಕೂದಲ ಎಣಿಸುತ್ತಾ 
ಮಲಗಿದ್ದೇನೆ
ಯಾರು ಎಚ್ಚರಿಸುವದಿಲ್ಲ

ಅನಾಹತ ದ  ಆಳದಲ್ಲಿ ಮಿಡಿಯುವ
ನಮ್ಮ ಆತ್ಮಗಳ ಮಿಲನದ ನಾದಕ್ಕೆ
ಜಗತ್ತು ಮನ ಸೋತಿದೆಯಂತೆ 

ಹೌದಾ ?? ನನ್ನ ಚಲುವ ಶ್ಯಾಮಾ??


ನಾದ-೨


ಕಾರಣ ನೀನೇ!!


ಬಕ್ಕ ಬಾರಲು ಬಿದ್ದಿದ್ದ ಆಸೆಗಳು
ನಿನ್ನ ನೋಡುತ್ತಲೇ ಚಿಗುರಿಕೊಂಡವು
ಮುಗುಳ್ನಕ್ಕು ವರ್ಷಗಟ್ಟಲೇ ತುಕ್ಕು
ಹಿಡಿದಿದ್ದ ನರನಾಡಿಗಳ ಸವರಿ ಮತ್ತೆ ದೇಹ
ವೀಣೆಯ ಶ್ರುತಿ ಹಿಡಿದವಳು ನೀನೇ!!

ತಾರೆಗಳ ಬೆಳಕಿನ ಮಳೆಯಲ್ಲಿ ಮಿಂದ ಕನಸಿತ್ತು
ಅಲ್ಲಿ ನನ್ನ ಕೈ ಚಾಚಿದ್ದು ನಿನ್ನ ಹೃದಯ ಚಂದ್ರಮನಿಗಾಗಿ
ಕಳೆದ ವಸಂತಗಳ ಲೆಕ್ಕವಿಟ್ಟಿರಲಿಲ್ಲ ನಾನೂ
ದಿನಾ ಇಣುಕುವ ಬಿಳಿ ಕೂದಲಿಗೆ
ಕಪ್ಪು ಬಣ್ಣ ಬೇಕು ಅಂದದ್ದು ನಿನ್ನ ಕೊಂಕು ಕಣ್ಣೋಟವೇ!!

ಚಿಪ್ಪಿನಲ್ಲಿ ಅವಿತಿದ್ದ ತುಂಟತನ
ಈಗ ಕಚಗುಳಿ ಇಡುತ್ತಿದೆ
ಚಳೀಗಾಲವಿದು..ಎಳೆಬಿಸಿಲು 
ನೀ ಆದರೆ ಚಂದ, ಮಾತು ಬರದ
ನನ್ನ ಮೌನ ಒಲವಿಗೆ ನಿನ್ನ 
ಬಿಸಿ ಮುತ್ತಿನ ಒಪ್ಪಿಗೆ ಸಿಕ್ಕರೆ ಸಾಕು!!

ಕೇಳಬೇಡ ಈಗ, ಎಲ್ಲದಕು ಕಾರಣ
ನೀನೇ!!

ನಾದ -೩


ದಾರಿಯಲಿ ಬಿದ್ದವಳು ಕಣ್ತೆರೆವ ಮೊದಲೇ 
ತುಳಿದು ತಳ್ಳಿದವರು ಎಷ್ಟೋ ಮಂದಿ 
ತಿರಸ್ಕಾರ ನಿಂದೆಗಳಿಗೆ  ಪಕ್ಕಾಗಿ ಸುಕ್ಕಾದರೂ 
ಹರಿಯುತಿದ್ದ ಆಸೆಯ ಅಮೃತ ವಾಹಿನಿಯ ಹೊತ್ತು ಕಾಯುತಲಿದ್ದೆ... 

ಬಂದೇ ಬಂದನಲ್ಲ ಅವ.. 
ಯಾವ ಸೀಮೆಯ ಮಾಯಕಾರ ??
ಯಾವ ಲೋಕದ ಸಂತ??
ಬರುವ ಹಾದಿಗೆಲ್ಲಾ ಕಾಮನಬಿಲ್ಲು 
ನಿಂತಲ್ಲೆಲ್ಲ  ಕಿಲಿಸುವ ಹೂ ಹುಲ್ಲು 
ನನ್ನ ನೋಡಿ ಮುಗುಳ್ನಕ್ಕ 
ಅಂತಿದ್ದ ನೂರು ಜಾಢ್ಯಗಳ ಧೂಳ 
ತನ್ನ ಚಿಗುರು ಬೆರಳುಗಳಲ್ಲಿ ಸವರಿ 
ತನ್ನ ತುಟಿಗಿಟ್ಟ!!

ಇವ ಗಂಧರ್ವನೇ  ಇರಬೇಕು!!

ನಾನೀಗ ಹರಿಯುತ್ತಿದ್ದೇನೆ ಸಲಿಲ ಹೊಸ ರಾಗಗಳಲ್ಲಿ 
ನವ ರಂಧ್ರಗಳ ಕೊಳೆಯ ತೊಳೆದವನೇ ಹೇಳು 
ಅದೋ ಮಂದ್ರದಿಂದ ಷಡ್ಜದವರೆಗೆ 
ಕಣಕಣವ ಅರಳಿಸಿ 
ನನ್ನ ಭಾಗ್ಯದ ಕುಂಡಲಿನಿಯ 
ಮೂಲಾಧಾರದಿಂದ ಸಹಸ್ರಾರಕ್ಕೆ 
ತಾಕಿಸಿ ಹೋಳಾಗಿಸಿದೆ .. 


ಇದು ಚಂದ್ರ ಕೌಂಸ ವಲ್ಲ ಭೈರವಿಯೂ ಅಲ್ಲ 
ಬಹುಶಃ  ಮೋಹನವೇ ? ಇರಬೇಕು!!
ಋತುಕಾಲಗಳೆಲ್ಲ  ನಿಂತಿವೆ ..
ಸಪ್ತಋಷಿ ಮಂಡಲವೋ ಹಾಲ ಕಣಿವೆಯೋ 
ಇವನ ಕಣ್ಣ ಬೆಳಕಲ್ಲೇ ಹುಟ್ಟಿದವೇ??
ಸುತ್ತೆಲ್ಲ ಹರಿವ ನಾದಗಂಗೆ 
ಬೆಳಕೋ ಬೆಳಕು 
ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ 
ನಿನ್ನ ಉಸಿರಿಗೆ ಪಕ್ಕಾಗಿ 
ನಾನೀಗ ಅಲೌಕಿಕೆ !!

ನನಗಿನ್ನು  ಸಾವಿಲ್ಲ!!





Thursday, January 2, 2014

ಒಲವ ಭಾಷೆ

1 -ಒಲವು 

ಥೂ  ಇವತ್ತೂ ಲೇಟ್  ಆಯ್ತು . ಅಮ್ಮ ಬೈಯ್ಯೋದು  ಗ್ಯಾರಂಟಿ . ....   
ಹೇಳ್ತಾನೆ ಇದ್ದೀನಿ  "ಪಮ್ಮಿ ಲೇಟ್ ಆಗುತ್ತೆ" ಕೇಳೋದೇ ಇಲ್ಲ ನನ್ನ ಮಾತು, ಮಹತಿಯ ಮನದಲ್ಲಿ ಆತಂಕದ ಅಲೆ.. 
ಕಣ್ಣೆದುರು ಕನ್ನಡಕದ ಅಪ್ಪ,ಕೆಂಪು ಕಣ್ಣಿನ ಅಮ್ಮನ  ನೆನಪು ಬಂದು ತಲೆ ಸುತ್ತಿದ ಹಾಗಾಯ್ತು ... 
"ಏನೇ,ಮನೆ ಬರೋ ಮುಂಚೆನೇ ತಲೆ ಮೇಲೆ ಬಂಡೆ ಹೊತ್ತೋಳ ತರ ಆಡ್ತಾ ಇದ್ದೀಯ, ನಿನ್ನ ಅಪ್ಪ ಅಮ್ಮ ಏನು  ಹುಲಿ,ಸಿಂಹನಾ" ಪಮ್ಮಿಯ ಮಾತು ಚುಚ್ಚಿತು. ಹೌದು ಮತ್ತೆ ಹುಲಿ,ಸಿಂಹಾನೇ ,ಅದೇ ತನ್ನ ಫ್ರೆಂಡ್  ನಂದಿನಿ, ಥೆಕ್ ಹೋಗಿ ಬಂದರೂ ಏನ್ ಹೇಳಲ್ಲ , ತನಗೆ ಕಂಬೈನ್ ಸ್ಟಡಿಗು ಹೋಗೋಕ್ಕೆ ಬಿಡಲ್ಲ .. ಸಿಟ್ಟು  ಅಸಹಾಯಕತೆ ಒಟ್ಟೊಟ್ಟಿಗೆ  ಬಂತು,ಅಪ್ಪ ಅಮ್ಮನ ಮೇಲೆ ತಿರಸ್ಕಾರ  ಹುಟ್ಟಿತು.. 
"ಮನೆ ಬಂತು ಇಳ್ಕೋ,ಮೂತಿ ಹಾಗೆ ಇಟ್ಕೊಂಡಿರು,ನಿಂಗೆ ನಾನೇನೋ ಮಾಡಿದ್ದೀನಿ  ಅಂತ ನಿಮ್ಮಪ್ಪ,ಅಮ್ಮ ತಿಳ್ಕೊಳ್ಳಲಿ .."ಎಂದ ಪಮ್ಮಿಯ ಮುಖ ನೋಡಿದಳು ... " ಬೈ ..ನಾಳೆ ಸಿಗ್ತೀನಿ " ಅಂದು ಅವನು  ಬೇರೇನೋ ಹೇಳೋದಿಕ್ಕೆ ಮುಂಚೆ ಗೇಟ್ ತೆಗೆದು ಒಳಗೆ ಓಡಿದಳು.. ಬೆಲ್ ಬಾರಿಸಿದಳು... ಯಾರೂ  ತೆರೆಯಲಿಲ್ಲ..ಒಮ್ಮೆ ಬಾಗಿಲನ್ನು ಮೆಲ್ಲನೆ ತಳ್ಳಿದಳು .. ಬಾಗಿಲು ತೆರೆದಿತ್ತು..ಆತಂಕದ ಜೊತೆ ಸಂತಸವು ಆಯಿತು ..
ಅಪ್ಪ ಅಮ್ಮನ ಸುಳಿವಿಲ್ಲ.. "ಅಮ್ಮಾ,ಅಪ್ಪಾ " ಕೂಗಿ ನೋಡಿದಳು ..ಸದ್ದಿಲ್ಲ .. ಸ್ವತಂತ್ರವಾದ ಭಾವ   .. ಟಿ.ವಿ ಹಾಕಿದಳು..ಮುಖ ತೊಳೆದು ಬಂದು ಸೋಫಾ ಮೇಲೆ  ಕುಳಿತಳು..ಸಮಯ ಹೋದದ್ದೇ ಗೊತ್ತಾಗಲಿಲ್ಲ ..  ಗಂಟೆ ಹತ್ತೂವರೆ ಆಯ್ತು.. ಯಾಕೋ  ಒಂತರದ ನಡುಕ  ಶುರುವಾಯ್ತು .. 
ಅಪ್ಪನ ಫೋನಿಗೆ ಟ್ರೈ ಮಾಡಿದಳು ..ಸ್ವಿಚ್  ಆಫ್  ಬಂತು ..ಸಣ್ಣದಾಗಿ ಗಾಬರಿ ಶುರುವಾಯ್ತು.. ಅಮ್ಮನ ಮೊಬೈಲಿಗೆ    ಟ್ರೈ ಮಾಡಿದಳು. ..ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂದು ಬಂತು ... ಸಣ್ಣದಾಗಿ  ಭಯ ಕಾಡಲಾರಂಭಿಸಿತು.. 
ಈ ದೊಡ್ಡ ಮನೆಯಲ್ಲಿ  ಭೂತದ ತರ ಒಬ್ಬಳೇ ಯಾವತ್ತೂ ಇದ್ದವಳಲ್ಲ ತಾನು,ಒಮ್ಮೆ 5 ನೇ ತರಗತಿಯಲ್ಲಿದ್ದಾಗ ಅಮ್ಮ ಮನೆಯಲ್ಲಿ ಬಿಟ್ಟು ತರಕಾರಿ ತರಲು ಹೋಗಿದ್ದಾಗ ತಾನೆಷ್ಟು ಅತ್ತಿದ್ದೆ .. ಒಮ್ಮೆ ಅಪ್ಪ ಅಮ್ಮನ ರೂಮಿಗೆ ಹೋಗಿ ನೋಡಲೇ ?? 
ನಿಧಾನವಾಗಿ ರೂಮಿನ ಬಾಗಿಲು ತೆರೆದಳು.ಅಪ್ಪನ ಆಫೀಸಿನ ಬ್ಯಾಗು.ಅಮ್ಮನ  ಸೀರೆ  ಮಂಚದ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು..  ಯಾವತ್ತು ಅಪ್ಪನ ವಾರ್ಡ್ ರೋಬಿಗೆ  ಕೈ ಹಾಕಿದವಳಲ್ಲ..ಈ ದಿನ ಕೆಟ್ಟ ಕುತೂಹಲ.... ತೆರೆಯುತ್ತಿದ್ದ ಹಾಗೆ ಕಂಡದ್ದು ಫೈಲುಗಳ ರಾಶಿ.. ಹಾಗೇ ಒಂದು ಪುಟ್ಟ ಕೆಂಪು ಬಾಕ್ಸ್ ..... ಆಹ್ !! ಎಷ್ಟು ಸುಂದರವಾಗಿದೆ...ತೆರೆಯಲು ಪ್ರಯತ್ನಿಸಿದಳು..  ಲಾಕ್  ತೆರೆಯಲಾಗಲಿಲ್ಲ ..ಯೋಚಿಸುತ್ತಾ  ಕುಳಿತಳು.. 
"ಮಹತಿ .. ಏನ್ ಮಾಡ್ತಾ ಇದ್ದೀಯ??"
ಅಮ್ಮನ ದ್ವನಿ ಎಚ್ಚರಿಸಿತು.. ಭಯ ಬಿದ್ದವಳಂತೆ ನೋಡಿದಳು.ಮೊಗದ ತುಂಬಾ ಪ್ರೀತಿ  ಹೊತ್ತ ಅಮ್ಮ ಅಪ್ಪ.. ಆದರೆ ಆ ಕೆಂಪು ಬಾಕ್ಸ್ ನಲ್ಲಿ  ಏನಿದೆ?.. 
"ನಮ್ಮ ರೂಮ್ನಲ್ಲಿ ಅದೂ ಅಪ್ಪನ ವಾರ್ಡ ರೋಬ್  ತೆಗೆದು  ಏನ್ ಮಾಡ್ತಾ ಇದ್ದೀಯ?? ಯಾವ್ಯಾವುದೋ  ಮುಖ್ಯ ಫೈಲುಗಳಿರುತ್ವೆ .."
ಕೇಳಿಸದವಳಂತೆ  ಅಮ್ಮನನ್ನೇ ದಿಟ್ಟಿಸಿದಳು ... ಮುಖದಲ್ಲಿ ಕುತೂಹಲ  ಮಾತಾಗಿತ್ತು.. 
"ಅಮ್ಮಾ, ಆ ಕೆಂಪು ಬಾಕ್ಸ್ ನಲ್ಲಿ  ಏನಿದೆ??"
"ಓ  ಅದಾ.. ಬಿಡು ..ನಿಮ್ಮಪ್ಪ ಅಮ್ಮನ ಆಸ್ತಿ... ನಿಂಗೇನು ಅದು ಮುಖ್ಯವಲ್ಲ ಆಲ್ವಾ??"
ಅಮ್ಮನ ಸಣ್ಣ ಚುಚ್ಚುವಿಕೆ ತಾಗಿದವಳಂತೆ ಮುಖ ಬಾಡಿತು.. 
"ಅಮ್ಮಾ..ಪ್ಲೀಸ್ ಹಾಗೆಲ್ಲ ಮಾತಾಡಬೇಡ ಅಮ್ಮಾ, ಏನಿದೆ ಅಮ್ಮಾ..ಪ್ಲೀಸ್ ತೋರಿಸು "
"ತಗೋ..ನೋಡು " ಅಮ್ಮ ಕೊಟ್ಟ ಸಣ್ಣ ಕೀಲಿಯನ್ನ ನೋಡಿ ಕುಶಿಯಾಯ್ತು.. 
ತೆರೆದಾಗ ಕಂಡದ್ದೇನು ??
ಪುಟ್ಟದಾದ ಫ್ರಾಕು ,ಒಂದು ಪುಟ್ಟ ಬಿಳೀ ಕೋಟು..  ಕಾಗೆ ಗುಬ್ಬಿ ಅಕ್ಷರದಲ್ಲಿ  ಗೀಚಿದ್ದ "ಅಮ್ಮ. ಅಪ್ಪ ಲವ್ ಯು " ಅನ್ನೋ ಅಕ್ಷರಗಳು..  ಅರ್ಥವಾಗಲಿಲ್ಲ..
ಅಪ್ಪನಿಗೆ ಇವಳ ಮುಖ ನೋಡಿಯೇ ಗೊತ್ತಾಯಿತು...
ಪಕ್ಕದಲ್ಲಿ ಬಂದು ಕೂತರು...
ಕೈ ಹಿಡಿದು "ಪುಟ್ಟಾ ,ಇದೆಲ್ಲ ನಿನ್ನ ಪುಟ್ಟ ಕನಸುಗಳು..ನಮ್ಮ ಆಸ್ತಿ.. ನನಗೆ ಗೊತ್ತು..ನಿನ್ನೆಲ್ಲಾ ಆಸೆಗಳನ್ನ ಪೂರೈಸಲು ಸಾಧ್ಯವಾಗುತ್ತಿಲ್ಲ..ನಿನ್ನ ವಯಸ್ಸಿಗೆ ತಕ್ಕಂತೆ ಬಯಕೆಗಳಿಗೆ ಸ್ವಾತಂತ್ರದ ರೆಕ್ಕೆ ತೊಡಿಸಲಾಗುತ್ತಿಲ್ಲ ಎಂದು.. ಆದರೆ ಪುಟ್ಟಾ..
ನಿನ್ನ ಬದುಕು ದೊಡ್ಡದಿದೆ..ನಿನ್ನ ಪುಟ್ಟ ಆಸೆಗಳನ್ನ ಯಾವತ್ತೂ ಪೂರ್ತಿ ಮಾಡಿದ್ದೀವಿ..ನೀನು ನಂಗೆ ಇರೋ ಒಂದೇ ಆಸ್ತಿ..ನಿನ್ನ ದೇಹ ಮನಸ್ಸು ಎರಡು ಸ್ವಸ್ಥ ಮತ್ತು ಬಲಿಷ್ಟವಾಗಿ ಬೆಳೆಯಬೇಕು..ಎಲ್ಲಾ ವಯೋಸಹಜ ಆಸೆಗಳನ್ನ ಮೀರಿ ನಿನ್ನ ಗುರಿಯತ್ತ ಗಮನ ಹರಿಸು..
ನೀನು ಚಿಕ್ಕೊಳಿದಾಗ ಈ ಪುಟ್ಟ ಕೋಟನ್ನ ಅದೆಷ್ಟು ಪ್ರೀತಿಸಿದ್ದೀಯಾ..ನಾನು ದಾಖ್ತೊರ್ರು ಆಗ್ತೀನಿ ಅಂತಿದ್ದೆ.. ಅವೇ ನಮ್ಮ ಅಸ್ತಿ ಪುಟ್ಟಾ"
ಮಹತಿಯ ಬಟ್ಟಲು ಕಂಗಳಲ್ಲಿ ಅಪ್ಪ ಅಮ್ಮನ ನಿರೀಕ್ಷೆಗಳು ಮಿನುಗಿತು ...ಅಪ್ಪ ಅಮ್ಮನನ್ನ ಶತ್ರುವಿನಂತೆ ಯೋಚಿಸುತ್ತಿದ್ದ ನೆನೆದು  ಕಂಗಳಲ್ಲಿ ಹಟ,ಪಶ್ಚಾತ್ತಾಪ ಕಣ್ಣೀರಾಗಿ ಹರಿಯಿತು... ಮನಸ್ಸು  ದೃಢವಾಯ್ತು..


2-ಒಲವು

ಒಂದು ವಾರ ಇರಲಿಲ್ಲ ...ಇನ್ ಬಾಕ್ಸ್ ತುಂಬಾ ಸಂದೇಶಗಳ ರಾಶಿ ರಾಶಿ .... ಒಂದೊದಕ್ಕೆ  ಉತ್ತರಿಸುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ ಅವಳಿಗೆ ... ಮಧ್ಯಾಹ್ನದ ಊಟದ  ನಂತರ ಮುಖಪುಸ್ತಕವನ್ನು ಓದುವುದು ರೂಢಿ .. ನಿಧಾನಕ್ಕೆ ಒಂದು ಸ್ಟೇಟಸ್ ಹಾಕಿ ಬಂದ  ಸಂದೇಶಗಳನ್ನೆಲ್ಲಾ ಓದ ತೊಡಗಿದ್ದಳಷ್ಟೇ ... ಇದ್ದಕ್ಕಿದ್ದಂತೆ  ಐ ಲವ್ ಯೂ  ಅಂತ ಯಾರದ್ದೋ ಸಂದೇಶ ಕಾಣಿಸಿತು.. ಕುತೂಹಲ ಜೊತೆಗೆ ಇದನ್ನ ಹಾಕಿದವನ ಮನಸ್ಥಿತಿ ಎಂತದ್ದಿರಬಹುದೆನ್ನೋ ಯೋಚನೆ ಕೂಡ ಕಾಡಿತ್ತು .. ಆತನ ಪ್ರೊಫೈಲನ್ನ ತೆಗೆದು ನೋಡಿದಳು..ಒಂದಿಪ್ಪತ್ತೋ ಇಪ್ಪತ್ತೊಂದೋ ವಯಸ್ಸಿರಬಹುದು .. ತುಂಬಾ ಮುದ್ದಾದ ಹುಡುಗ... ಮನಸ್ಸು ಚಂಚಲವಾಯ್ತು... ಅವನ ಸಂದೇಶಕ್ಕೆ ಉತ್ತರಿಸಿದಳು.. ಸಂಜೆಯ ತನಕ ಕೆಲಸಗಳ ನಡುವೆಯೇ ಅವನ ಜೊತೆ ಸಂದೇಶಗಳೊಂದಿಗೆ ಮಾತಾಡುತ್ತಲೇ ಇದ್ದಳು .. ಮೊಬೈಲಿನ ನಂಬರು ಕೂಡ ಅದಲು ಬದಲಾಯಿತು..
ಮರುದಿನ ಏಳುವದಕ್ಕಿಲ್ಲ ಕರೆ ಬಂದಿತ್ತು . ಮಾತಾಡುತ್ತಲೇ ಕೆಲಸ ಮುಗಿಸಿ ತಯಾರಾಗಿ ಹೊರಟು ನಿಂತಳು ..ಇವರ ಸಂಭಾಷಣೆಯನ್ನ  ಕೇಳುತ್ತಿದ್ದ ಗಂಡನಿಗೆ ಏನೋ ಸಂಶಯ ..ಆಕೆ ಅವನ ಮುಖದ ಮೇಲಿದ್ದ ಪ್ರಶ್ನೆಗಳನ್ನೆಲ್ಲಾ ನಿವಾಳಿಸಿ ಒಗೆದವಳಂತೆ ಮೊಬೈಲನ್ನ ಕಿವಿಗೊತ್ತಿ ನಡೆದೆ ಬಿಟ್ಟಳು..
ಆ ದಿನದ ಕೊನೆಯಲ್ಲಿ ಅವರು ಮುಂದಿನ ಭಾನುವಾರ ಊಟಕ್ಕೆ ಸಿಗುವದೆಂತಲೂ  ಅವಳು ಗುಲಾಬಿ ಸೀರೆ ಉಟ್ಟು ಬರಬೇಕು ಅಂತಲೂ  ನಿರ್ಧಾರವಾಯಿತು...
ಇವತ್ತು ಭಾನುವಾರ..ಆಕೆ ತುಂಬಾ ಸಡಗರದಿಂದಲೇ ತಯಾರಾದಳು ಅವಳ ಗಂಡನಿಗೋ ಕುತೂಹಲ ಮುದ್ದಾಗಿ ಕಾಣುತ್ತಿದ್ದಳು ಬೇರೆ ..ಮುಖದಲ್ಲಿ ಮೊದಲನೆಯ ದಿನ ತಾನು ಕಂಡಾಗಿನ ಕುಶಿ ..ಯಾಕೊ ಇತ್ತೀಚಿನ ಅವಳ ನಡವಳಿಕೆಗಳು ವಿಚಿತ್ರವಾಗಿ ಕಾಣುತ್ತಿದ್ದವು.. ಸಂಶಯದ ನೆರಳಿತ್ತು... ಪರಿಹಾರಕ್ಕೆ ಅಂತ ಅವಳ ಜೊತೆ ನಾನು ಬರುತ್ತೇನೆ ಅಂದ "ಬೇಡ ..ನಿಮ್ಮನ್ಯಾರು ಅಲ್ಲಿ ಕರೆದಿಲ್ಲ " ಒರಟಾಗಿ ಅಂದು ಬಿಟ್ಟಳಲ್ಲ!!ಅವಳು ಹೋದ ಐದೇ ನಿಮಿಷಕ್ಕೆ ಬೈಕನ್ನು ತೆಗೆದುಕೊಂಡು ಗಂಡನು ಪತ್ತೇದಾರಿಕೆ ಮಾಡಲು ದೌಡಾಯಿಸಿದ ..

ತುಂಬಾ ಒಳ್ಳೆಯ ಹೋಟೆಲ್ .ಅವರಿಬ್ಬರೂ ಎದುರು ಬದರು ಕುಳಿತಿದ್ದಾರೆ. ಅವಳಿಗೆ ಅವನ ಕಸಿವಿಸಿ ನೋಡಿ ಒಳಗೊಳಗೇ ನಗು... ಕೇಳಿದಳು...
"ನಾನು ಬಂದೆ ಬರ್ತೀನಿ ಅಂತ ಗೊತ್ತಿತ್ತಾ?"

"ಬರದೇ!! ನಾನು ಅಷ್ಟ ಪ್ರೀತಿ ಇಂದ ಕರೆದಿದ್ದೀನಿ .. ಮೊದ ಮೊದಲು ನೀವು ಒಪ್ಪುತ್ತಿರೋ ಇಲ್ಲವೋ ಅಂತ ಭಯವಾಗಿತ್ತು"

"ನನಗಿಂತ ಚಂದದ ಹೆಣ್ಣುಗಳೂ ಕೂಡ ಅಲ್ಲಿದ್ದರು..ಆದರೂ ನನ್ನೇ ಯಾಕೆ ಕರೆದದ್ದು? ಅದಿರಲಿ..ನಿನ್ನ ತಂದೆ ತಾಯಿ??"

"ಅಪ್ಪ ಮನೆಯಲ್ಲಿ ಇಲ್ಲ ಸೌದಿಗೆ ಹೋಗಿ ಹತ್ತು ವರುಶಗಳಾಯ್ತು... ಅಮ್ಮ ಕೂಡ ಕೆಲಸಕ್ಕೆ ಹೋಗ್ತಾರೆ.. ನಂಗೆ  ಅಮ್ಮನ್ನ ಕಂಡರೆ ತುಂಬಾ ಇಷ್ಟ"

"ನಾನು ನಿನಗಿಂತ ತುಂಬಾ ದೊಡ್ದವಳು. ಮತ್ತೆ ನಿನ್ನ ಈ ವಯಸ್ಸಿನ ಎಲ್ಲ ತಳಮಳಗಳನ್ನ ದಾಟಿ ಬಂದವಳೂ ಕೂಡ ..ನಿನ್ನ ಕರೆಗೆ ಒಪ್ಪಿದ್ದು ಒಂದೆ ಕಾರಣಕ್ಕೆ "

ಅವನ ಮುದ್ದು ಮುಖದಲ್ಲಿ  ಪ್ರಶ್ನಾರ್ಥಕ ಚಿಹ್ನೆ " ಏನದು"

"ನೀ ನನ್ನ ಪ್ರೀತಿಸ್ತೀಯ ಆಲ್ವಾ?"

"ಹೌದು"

" ಹಾಗಾದರೆ  ನನ್ನ ಗಂಡ ಅಲ್ಲಿ ಹಿಂದೇ ಕೂತಿದ್ದಾರೆ ಅವರನ್ನ ಒಂದು ಮಾತು ಕೇಳಲಾ??"

ಅವನ ಮುಖದಲ್ಲಿ ಭಯ ಟಿಸಿಲೊಡೆಯಿತು"ನೀವು ಇಷ್ಟ ಇಲ್ಲ ಅಂದಿದ್ರೆ ಸಾಕಿತ್ತು..ಇದೆಲ್ಲಾ ಈ ತರ  ಮಾಡಿದ್ದು ಯಾಕೆ?"

"ಕೂತುಕೋ ..ನಾ ನಿಂಗೆ ಹೇಳ ಬಂದದ್ದು  ಬೇರೆ. ಮೊದಲು ಕೇಳು . ಆಮೇಲೆ ತೀರ್ಮಾನಿಸು "

"ಹೇಳಿ"

" ನಿನಗೀಗ ಇಪ್ಪತ್ತೊಂದು ನಿನ್ನ  ಎಂ ಬಿ ಎ  ಮೊದಲ ವರ್ಷ ಆಲ್ವಾ??
"ಹುಂ"
"ನಾ ಮದ್ವೆಯಾದದ್ದು ಹತ್ತೊಂಬತ್ತು ವರ್ಶಕ್ಕೆ..ನಮ್ಗೇನಾದ್ರು  ಮಗ ಇದ್ದಿದ್ರೆ ಆವಾ ನಿನಗಿಂತ ಎರಡು ವರ್ಷ  ಚಿಕ್ಕವನಿರ್ತಿದ್ದನೋ ಏನೋ ..ಆದರೆ ಅವನಿಗೆ ಐದು ತುಂಬುವ ಮೊದಲೇ ವಿಪರಿತ ಕಾಯಿಲೆ ಇಂದ ಕಳ್ಕೊಂಡು ಬಿಟ್ವಿ.. ..ನನಗೆ ಆಪರೇಷನ್  ಆಗಿತ್ತು ಹಾಗಾಗಿ ಮತ್ತೆ ಮಗು ಆಗೋದು ಕನಸಾಗೇ ಉಳೀತು... ನಿನ್ನ ಪರಿಚಯ ನಂಗೆ ಮಗನ ಮತ್ತೆ ನೋಡಿದಂತೆ  ಭಾಸ ಆಯಿತು .ಜೊತೆಗೆ ನಿನ್ನಂತಹ ಪುಟ್ಟ ಯುವಕರು ಸೋಶಿಯಲ್  ನೆಟ್ ಅನ್ನ  ಈ ತರ ಬಳಸ್ತಿರೋದು ನೋಡಿ ಖೇದವೂ ಆಯ್ತು ..ಇಲ್ಲಿ ಕೇಳು .ನಾ ನಿನಗೆ ಅಮ್ಮನೂ ಆಗಬಹುದಲ್ಲವಾ. ಹೆಣ್ಣು ಅಂದಾಕ್ಷಣ ಬರಿ ಕಾಮವೇ ಯಾಕೆ ಮನಸ್ಸಿಗೆ ಬರಬೇಕು ..ಇಷ್ಟ  ಅಂದಾಕ್ಷಣ ಅದು ದೇಹದಲ್ಲೇ ಯಾಕೆ ಕೊನೆಗೊಳ್ಳಬೇಕು ?/ ಪ್ರೀತಿ ಅಂದರೆ ಕೇವಲ ದೈಹಿಕ ಮಾತ್ರವೇ?? ನಿನ್ನ ಮುಖ ನೋಡ್ತಾ  ನನಗೆ ಮಮತೆ ಉಕ್ಕುತ್ತೆ..ನನ್ನ ಸತ್ತು ಹೋದ ತಾಯ್ತನ ಮತ್ತೆ ಚಿಗುರಾಗುತ್ತೆ...ನಾನ್ಯಾಕೆ ನಿಂಗೆ ಅಮ್ಮನ ತರಾ ಅನ್ನಿಸಲಿಲ್ಲ??"
ಅವಳು ಹೇಳುತ್ತಲೇ ಹೋದಳು ... ಅವಳ ಮನದ ಮಾತುಗಳನ್ನ ಕೇಳಿ ಅವನ ಕಣ್ಣಿನ ಪೊರೆ ಸರಿಯಿತು.. ಅವಳ ಕಣ್ಣಿನಲ್ಲಿ ಬಂದ ಹನಿಗಳು ಅವನ ಕಣ್ಣಲ್ಲೂ ಸುರಿಯ ತೊಡಗಿದವು...

ಓಡಿ ಬಂದು ಎಲ್ಲರೆದುರು ಅವಳ ಕಾಲಿಗೆ ಬಿದ್ದ.."ನನ್ನ ಮಗ ಅಂತ ಸ್ವೀಕರಿಸಿ ಪ್ಲೀಸ್ ... ನಿಮ್ಮ ಈ ಪ್ರೀತಿನ ಕಳ್ಕೊಳ್ಳೋಕೆ ನಾ ತಯಾರಿಲ್ಲ..ನನಗೆ ಇವತ್ತಿಂದ ಎರಡು ಅಮ್ಮಂದಿರು ..ನನ್ನ ತಪ್ಪೆಲ್ಲ ಕ್ಷಮಿಸಿ" ಅವನನ್ನೆತ್ತಿ ಮಮತೆ ಇಂದ ಅಪ್ಪಿದಳು ಅವಳು..

ಸಂಶಯ ಹೊತ್ತು ಬಂದಿದ್ದ ಗಂಡ  ತಲೆ ಕೆಳಗೆ ಹಾಕಿ ಕುಳಿತ!!