Monday, October 14, 2013

ನಿನಗೆ!!

ಗೆಳೆಯಾ....

ನಿನ್ನ ಜಗತ್ತಿನಲ್ಲಿ ನನಗಿರದ ಸ್ಥಾನಗಳ 
ನೆನೆದು ಮರುಕ ಪಡಲಿಲ್ಲ
ಬಿಡು..ಸುತ್ತ ನೂರು ತಾರೆಯರ ನಡುವೆ
ಮೆರೆವ ಚಂದ್ರಮನ ಎದೆಯಲ್ಲಿ
ಉರಿವುದು ಕೇವಲ ರೋಹಿಣಿಯ
ಕಣ್ಣದೀಪ ಮಾತ್ರ!!

ಹಾಗಂದ ಮಾತ್ರಕ್ಕೆ ನೀ ಅಪರಿಚಿತನಲ್ಲ
ನನ್ನ ಸಂದೇಶಗಳಿಗೆ ನಿರುತ್ತರ ಮಾತ್ರ,
ಆದರೂ,ಅಲ್ಲೆ ಎಲ್ಲೊ ನಿನ್ನ ಉಸಿರಿನ ಗಂಧ
ನನ್ನ ಮಾತ್ರ ಬಯಸಿದಂತನಿಸಿದ್ದು ಭ್ರಮೆಯಲ್ಲ!!

ಬಣ್ಣಗಳ ಬೆಳಕಿನಲ್ಲಿ, ಎಲ್ಲರ ಕಣ್ಣ ಸೆಳೆಯುವ ನೀನು
ಅದೆಷ್ಟು ಕನಸುಗಳಿಗೆ ರಾಜಕುಮಾರ??

ನೋಡಿಲ್ಲಿ, ನನ್ನ ಕನಸಿನ ಕೋಣೆಯಲ್ಲಿ
ಒಂದು ಕಿಟಕಿ ತೆಗೆದಿರುವೆ..ಬಂದುಬಿಡು
ಅವಕಾಶ ನಿನಗೇ ಮಾತ್ರ!!
ಸುಳ್ಳಾದರೂ ಸರಿಯೇಪ್ರೀತಿಸು ಒಮ್ಮೆ
ನಿನ್ನ ಬದುಕಿನಲ್ಲಿರಲಿ ನನಗೊಂದು ಚಿಕ್ಕದಾದರೂ
ಚೊಕ್ಕದಾದ  ಪಾತ್ರ!!



ನೀ....
ಚುಕ್ಕಿಚಂದ್ರಮರಾಚೆ ಉಳಿದ
ಬರೀ ಖಾಲಿ ಅವಕಾಶ

ನೀ...
ಕಲ್ಪನೆ ಕನಸುಗಳಾಚೆ ಸಪ್ತಸಾಗರದ
ಮೇಲೊಂದು ತೇಲುವ ಸಾಮ್ರಾಜ್ಯ
ಕಟ್ಟಿದ ಮಾಟಗಾರ...

ನೀ....
ನಿನ್ನ ಮಾಂತ್ರಿಕ ಕಣ್ಣ  
ನೋಟದ ಛಡಿಯೇಟಿಗೆ
ಸುತ್ತೇಳು ಲೋಕಗಳ ಕನ್ಯೆಯರ ಗೆದ್ದವ(ಹಾಗಂತ ಕೇಳಿದ ನೆನಪು!!)

ನೀ..
ಬಯಕೆಗಳ ಬೇಲಿಯ ಹಾರಿ ನನ್ನ
ಮಲ್ಲಿಗೆಯ ಹಿತ್ತಲಿಗೆ ಧಾಳಿ ಇಟ್ಟವ
ದೂರದೂರಿಂದ ಬಂದ ದುಂಬಿಗಳ ಬೆದರಿಸಿ
ನನ್ನ ಹೆಣ್ತನವ ಗೆದ್ದವ!!

ನೀ...
ಏನೇನೊ ಬರೆದರೂ ಬರೆಸಿಕೊಳ್ಳದೆ
ಖಾಲಿ ಉಳಿದ ಬಿಳೀ ಕಾಗದ
ಮತ್ತಿನ್ಯಾರೋ ಗೀಚಿ ಹೋಗುವ
ಪದಗಳಿಗೆ ಆಸ್ಥೆ ಇಂದ ಕಾದವ!!
(ಇನ್ನೂ ನೀ ಬರೆಸಿಕೊಳ್ಳುವ ಕ್ಷಣಗಳಿಗಾಗಿ ನಾ ಕಾದಿದ್ದೇನೆ!!)




7 comments:

  1. ಮೇಣ ಮತ್ತು ದೀಪ ಕರಗದೆ ಎಷ್ಟು ಹೊತ್ತು ಇರಬಲ್ಲುದೆ ??

    ReplyDelete
  2. 1. 'ಸುಳ್ಳಾದರೂ ಸರಿಯೇ ಪ್ರೀತಿಸು' ಏ‌ಎಮ್ದ ಕೂಡಲೇ ನನಗೆ ನೆನಪಾದದ್ದು ದೇವಾನಂದ್ ಮತ್ತು ಹೇಮಾಮಾಲಿನಿಯ 'ಫಲ್ಬರ್ಕೆ ಲಿಯೇ ಹಮೇ ಪ್ಯಾರ್ ಕರ್ದೇ' ಗೀತೆ.

    2. ನನಗೆ ತುಂಬಾ ಇಷ್ಟ ಆದದ್ದು ಆವರಣದೋಳ್ಗಿನ ಟಿಪ್ಪಣಿಯಂತಹ ಸಾಲುಗಳು.

    ReplyDelete
  3. ಶಮ್ಮಿ ಸಂಜೀವ್....
    ಅತ್ಯಂತ ನವಿರಾಗಿ ಭಾವಗಳನ್ನು ಪದಗಳ ಮೂಸೆಯೊಳಗೆ ಇಳಿಸಿದ್ದೀರಿ...
    ಮಲ್ಲಿಗೆಯ ಪರಿಮಳದಂತೆ ಅರಿವಿಲ್ಲದೇ ನಮ್ಮೊಳಗೆ ಕವಿತೆಯ ಸಾಲುಗಳು ಇಳಿದುಬಿಡುತ್ತವೆ....
    ನಿಮ್ಮ ಮಲ್ಲಿಗೆಯ ಮಂದಾರ ಜಗವೆಲ್ಲಾ ಹರಡಲಿ...

    ReplyDelete
  4. eradane kavitheya daati thumba ista aithu
    allade adara shailiyu thumba ista aithu madam

    ReplyDelete