Google+ Followers

Thursday, August 17, 2017

ಮಧುಮಾಸ ಚಂದ್ರಮ

ಇವತ್ತು ನಿನ್ನ ನೆನಪಾಗ್ತಿದೆ, ತುಂಬಾ ಅಂದರೆ ತುಂಬಾ, ಸಣ್ಣಗೆ ಬಿಸಿಲು ಕಾಯುವ ಮಧ್ಯಾಹ್ನಗಳಲ್ಲಿ ನಾನ್ಯಾವತ್ತೂ ನಿನ್ನೇ ಕಾಯುತ್ತಿದ್ದೆ, ಪುಟ್ಟ ಪಾರಿವಾಳವೊಂದು ಬೆಚ್ಚನೆಯ ಗೂಡಿಂದ ಕಾಣೆಯಾದರೆ ಅದೆಂಥ ಆಘಾತ ಅಲ್ಲವಾ?
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ
ಒಲವಿನ ಲೋಕಕೆ ನೀ ತಂದೆ ಪೂರ್ಣಿಮಾ....
ನೀನು ಹೊಸಬನಲ್ಲ, ಹಳಬನು ಅಲ್ಲ, ನಮ್ಮ ಪ್ರೇಮಕಥೆಗೆ ಅದ್ವಿತೀಯ ನಾಯಕನಲ್ಲ, ಆದರೂ ಬಾರಿ ಬಾರಿ ನಿನ್ನೇ ಬಯಸಿದ್ದು, ತನ್ಮೂಲಕ ನಾನು ಬಹುಶಃ ನನ್ನೇ ಹುಡುಕಿದ್ದು ನನಗೆ ಗೊತ್ತಿರುವ ವಿಷಯ, ನಿಜ ವರುಷ ಕಳೆದಂತೆಲ್ಲಾ ಜವಾಬ್ದಾರಿಗಳು ಬದಲಾಗುತ್ತವೆ, ಪ್ರಾಮುಖ್ಯತೆಗಳೂ, ಆದರೆ ಅದಕ್ಕೆಲ್ಲ ಮೂಲ ಪ್ರೇಮವನ್ನೇ ಬಿಟ್ಟು ಬೇರೆಲ್ಲ ಕಡೆ ಕೈ ಚಾಚಿದರೆ ನೆಮ್ಮದಿ ದೊರಕುತ್ತದಾ? ಇಲ್ಲ. ನೀನೀಗ ಅದನ್ನೇ ಮಾಡುತ್ತಿದ್ದಿ.
ನಾನಿಲ್ಲೆ ಇದ್ದೇನೆ ಎಂದು ಒಮ್ಮೆ ತೋಳ್ ಚಾಚಿ ನೀನಪ್ಪಬಾರದೆ? ನನ್ನ ತಲೆ ನೇವರಿಸಿ ಒಮ್ಮೆ ನೀನಿರು ಜತೆಗೆ, ಈ ಪ್ರಯಾಣ ಸುಗಮ ಅನ್ನಬಾರದೆ? ಮಾತುಗಳನ್ನೆಲ್ಲ ಅದಾವ ತಿಜೋರಿಯಲ್ಲಿ ಬಚ್ಚಿಟ್ಟು ಕೀ ಕಳೆದು ಕೊಂಡೆ?ದೂರವಿದ್ದು ಹತ್ತಿರ ಇರುವ ಪರಿಪಾಠ (ಪಡಿಪಾಟಲು ಕೂಡ)ನಾನು ನೋಡಿದ್ದೇನೆ
ಹತ್ತಿರವಿದ್ದು ಅದೆಷ್ಟೋ ಮೈಲಿಗಳ ಅಂತರವನ್ನು ಅದೆಷ್ಟು ಸಲೀಸಾಗಿ ಸ್ಥಾಪಿಸಿದ್ದೀ ನೀನು?ನನಗೆ ಅಷ್ಟು ದೂರಾ ಹೊರಳಿ ನಡೆಯಲಾಗದು, ನೀರಿರದ ನದಿಯ ದಡದಲ್ಲಿ ನಿಂತ ಒಂಟಿ ನಾವೆಯಂತೆ ನಾನು ಕಾಯುತ್ತಲೇ ಇರುವೆ, ನಿನ್ನ ಆ ದಡಕ್ಕೆ ನನ್ನ ತಲುಪಿಸಲಿ ಅಂತ, ನಮ್ಮ ನಡುವಿನ ಅಂತರ ಕೊಚ್ಚಿ ಹೋಗುವ ಪ್ರೇಮ ಮಳೆಯೊಂದು ಬರಲಿ, ನಾನು ಕಾದು ಕಾದು ಸೋತಿದ್ದೇನೆ. ನಿನಗಾಗಿ, ನನ್ನ ಕ್ಷೀಣ ದನಿ ನಿನಗೆ ಈ ಬಾರಿಯಾದರೂ ಕೇಳಲಿ
ಒಮ್ಮೆ ಬಾರೋ ಒಮ್ಮೆ ಬಾರೋ
ಹೇಗೆ ನೀನಿದ್ದರೂ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರೂ
ಸುರಿ ಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜತೆಯಲಿ ನೆನೆಯಲು ನಲ್ಲನೆ ಮನಸಾಗಿದೆ, ಮನಸೋತಿದೆ.....
(copy paste)
(Devakanagile)

Friday, July 21, 2017

ಎರಡು ಕಣ್ಣುಗಳು

ಕಿಟಕಿ, ಪುಟ್ಟ ಕಿಟಕಿಯಲ್ಲಿ ಅದೆಷ್ಟು ವಿಶಾಲ ಬಾನು ತುರುಕಿಸಲಾದೀತು? ತೀರಾ ನೀಲಿ ಅಷ್ಟೇ ಕಾಣಿಸುವ ರಾತ್ರಿಯಲ್ಲಿ ದೂರ ತಾರೆಗಳು ಮಸುಕಾಗಿ ಹೊಳೆವಷ್ಟೇ ಜಾಗ, ಅದೇ ಹಸಿರು, ಅದೇ ಪಕ್ಕದ ಮನೆಯ ಕಿಟಕಿ ಅದೇ ವಾಹನಗಳ ಶಬ್ದ. ಹೊರ ನೆಟ್ಟ ಎರಡು ಕಣ್ಣುಗಳು ಮನೆಯಿಡೀ ಸುತ್ತಾಡಿ ಮತ್ತೆ ಬಂದು ಅದೇ ಕಿಟಕಿಯಲ್ಲಿ ಹಣುಕುತ್ತವೆ , ಹೊರಗಿನ  ಜಗತ್ತಿಗೆ ಮೈಯಾಗುತ್ತವೆ,ಮಧ್ಯಾಹ್ನ ೨ ಗಂಟೆಯ ತನಕ ಬೇರೆ ಕೆಲಸವೇ ಇಲ್ಲ ಅನ್ನುವ ಹಾಗೆ , ೨ ರ ನಂತರ ಗೇಟಿನ ಶಬ್ದ, ಕಣ್ಣಲ್ಲೊಂದು  ದೀಪ ಸೆರಗು ಹೊದ್ದು ಓಡಾಡುವುದು, ಆಗೀಗ ಸದ್ದು  ಕೇಳುವುದು , ಮತ್ತೆ ಸ್ವಲ್ಪ ಹೊತ್ತಿನ ನಂತರ ಹೊರಗೆ ಗೇಟಿನ ಶಬ್ದ, ಮತ್ತದೇ ಮೌನ, ನಾಲ್ಕು ಗಂಟೆಗೆ ಪಕ್ಕದ ಬಿಲ್ಡಿಂಗಿನಲ್ಲಿ ಗಲಾಟೆ, ಕಣ್ಣುಗಳು ಮತ್ತಷ್ಟು ದೂರ ಹಿಗ್ಗಿ ನೋಡಲು ಪ್ರಯತ್ನಿಸುತ್ತಿವೆ, ಹೌದು ಪಕ್ಕದ ಮನೆಗೆ  ಯಾವುದೋ ಬಾಡಿಗೆಯವರು ಬಂದಿರಬೇಕು. ಸ್ವಲ್ಪ ಹೊತ್ತಿಗೆಲ್ಲ ಸದ್ದು ಕಮ್ಮಿಯಾಗುವುದು , ಪಕ್ಕದ ಮನೆಯ ಕಿಟಕಿ ದೊಡ್ಡದಾಗಿ ತೆರೆಯುತ್ತಲಿದೆ, ಅಲ್ಲೆರಡು ಜೋಡಿ ಕಣ್ಣುಗಳು , ಬಹುಶಃ ಈ ಕಣ್ಣುಗಳಿಗೆ ಸಂಕೋಚವೇ, ಕಿಟಕಿ ತುಸು ಓರೆಯಾಯಿತು, ಮರುದಿನ ಒಂಬತ್ತಕ್ಕೆಲ್ಲ ಮತ್ತೆ ತೆರೆದ ಕಿಟಕಿ, ಮತ್ತದಕ್ಕೆ ಅಂಟಿದ ಕಣ್ಣುಗಳು , ಆ ಕಡೆಯ ಕಿಟಕಿಯಲ್ಲೂ ಎರಡು ಕಣ್ಣುಗಳು  ಆದರೆ ಇವತ್ತು ಚೂರು ಬಾನು ಕಣ್ಣಲ್ಲೂ ಮಿನುಗಿತ್ತಾ?  ನೀಲಿ ಕಣ್ಣುಗಳೆರಡೂ ದಿಟ್ಟಿಸುತ್ತವೆ, ಆ ಕಿಡಕಿಯಲ್ಲಿ ಕಣ್ಣು  ಅರಳುತ್ತದೆ, ದಿನ ಕಳೆದಂತೆಲ್ಲ ಅದೇನು ಸಂಭಾಷಣೆ , ಮೌನದಲ್ಲಿ ಕಳೆದು ಹೋಗುತ್ತಿದ್ದ ಮಧ್ಯಾಹ್ನಗಳಲ್ಲಿ ಈಗ ಸಂಗೀತ , ಕಣ್ಣುಗಳೋ ರಾತ್ರಿ ತಾರೆಗಳನ್ನು ಕದ್ದು ಕೆಡಗಿಕೊಂಡಂತೆ ಹೊಳೆಯುತ್ತವೆ, ನಿರೀಕ್ಷೆಯಲ್ಲಿ, ಬಹುಶಃ ಗಂಟೆಗಳು ನಿಮಿಷಗಳಾಗಿ.
ಬಹಳ ದಿನಗಳ ನಂತರ ಮತ್ತೆ ಕಿಟಕಿಯಲ್ಲಿ ಅವೇ ಎರಡು ಕಣ್ಣುಗಳು . ಪಕ್ಕದ ಮನೆಯ ಕಿಟಕಿಗಳು ಮುಚ್ಚಿವೆ ಹೊರಗೆಲ್ಲ  ಚೂರೇ ಚೂರು ಕಾಣಿಸುತ್ತಿದ್ದ ನೀಲಿ ಬಾನು, ರಾತ್ರಿಯ ಚುಕ್ಕಿ ಚಂದ್ರಮರು ಈಗ ಕಾಣಿಸುವುದಿಲ್ಲ, ಅಲ್ಲಿ  ಮತ್ತೊಂದು ಮಹಡಿ ಏಳುತ್ತಿದೆ. ಬರಿ ಧೂಳು , ಶಬ್ದ ಅಷ್ಟೇ, ಕಿಟಕಿಯಲ್ಲಿನ ಕಣ್ಣುಗಳು ಕಂಬನಿಯಲ್ಲಿ ತೊಳೆಯುತ್ತಿವೆ, ಧೂಳಿಗೋ ?

Monday, July 17, 2017

ಧಾರವಾಹಿ ಸುಗಂಧಿನಿ - ಭಾಗ ೩

ಯಮುನೆ ಹರಿಯುತ್ತಿದ್ದಳು ಇಕ್ಕೆಲಗಳನ್ನು ಬಾಚಿ ಬಾಚಿ ತಬ್ಬಿ , ಒಮ್ಮೊಮ್ಮೆ ಮುನಿಸು ಹೊತ್ತಿನಲ್ಲಿ ಪುಂಡಾಟ ಮಾಡುವ ಮಗು, ಒಮ್ಮೊಮ್ಮೆ ಸರಳ ಸುಂದರಿ, ಒಮ್ಮೊಮ್ಮೆ ತೀರಾ ಯಾರಿಗೋ ಕಾದು  ಬೇಸತ್ತವಳಂತೆ, ವೈರಾಗಿಯೊಮ್ಮೊಮ್ಮೆ, ಒಮ್ಮೊಮ್ಮೆ ಮೋಹಿನಿ, ನದಿಯೆಂದರೆ ಯಮುನೆ, ನನ್ನೆದೆಯೊಳಗೂ ಅವಳು ಹರಿಯುತ್ತಿದ್ದಳು, ತಬ್ಬಲಿತನವನ್ನು ಸಂತೈಸಿ, ಸದಾ ನಾನಿಲ್ಲವೆ ಎನ್ನುವಳು, ನನ್ನ ಭಾವದ ಹರಿವು  ಅವಳ ನೀರ  ಹರಿವು ಎರಡೂ  ನೀರಸ ಬದುಕಿಗೆ ಆಗಾಗ ರಂಗು ತುಂಬುವ ಸುತ್ತಲ ಹಸಿರನ್ನ ನೋಡುತ್ತಾ ಕಳೆಯುತ್ತಲಿತ್ತು, ಕೈಯಿಟ್ಟರೆ ಸಾಕು ತಣ್ಣಗೆ ಕೊರೆವ ನೀರು, ಕಾಳಿಂದಿಯಲ್ಲಿ ಅಮೃತಪಾನವಾಗಿ ಬದಲಾಗುವ ಪರಿಗೆ ನಾನು ಆಶ್ಚರ್ಯ ಪಟ್ಟಿದ್ದುಂಟು ಬಹಳ ಸಲ  , ನನಗೆ ನೆನಪೇ ಇದೆ, ಚಿಕ್ಕವಳಿದ್ದಾಗ ಇದೆ ದಡದಗುಂಟ ಅಜಮಾಸು ನೂರು ಯೋಜನ  ಒಂದು ವಾರ ನಡೆದು ಅಲ್ಲಿ ಹಳ್ಳಿಯಲ್ಲಿ ತಂಗಿದ್ದೆವು ಅದನ್ನು ತಂದೆ "ವೃಂದಾವನ" ಅಂತ ಪರಿಚಯಿಸಿಕೊಟ್ಟಿದ್ದರು, ಅಲ್ಲಿಯ ಮಣ್ಣು ಹೂ ಹಣ್ಣು ಗೋಧಿಗೆ ಹೇಳಿ ಮಾಡಿಸಿದಂತಿತ್ತು , ಮಕ್ಕಳು ಬಲು ಚೂಟಿಯಾಗಿದ್ದರು , ಎಲ್ಲಕ್ಕಿಂತ ನನಗೆ ಆಗ ಬೆನ್ನು ಗೊತ್ತಾಗದಷ್ಟು ಚೂರು ಬಾಗಿತ್ತು , ಕಾಲೂ ,ಅಷ್ಟೇ, ಸುಮತಿ ಸುಗಣ್ಯ  ರಮಣಿ ಮುಂತಾದ ಮಕ್ಕಳೊಂದಿಗೆ ತಾನು ಕಳೆದ ಆ ದಿನಗಳು ಇವತ್ತಿಗೂ ನೆನಪಿದೆ, ಅಲ್ಲಿಯ ಯಮುನೆ ಇಲ್ಲಿಯವಳಲ್ಲ ಅಂತ ಬಹಳ ಸರಿ ಅನಿಸಿದ್ದಿದೆ, ಬೆಟ್ಟ ಬಯಲು ಎರಡು ಸಮ್ಮಾನವಾಗಿ ಹಂಚಿ ಹರಿಯುತ್ತಿದ್ದ ಆ ಪ್ರದೇಶ ಕೂಡ ನಂದನ ವಂಶಸ್ಥರಿಗೆ ಸೇರಿದ್ದು ಅಂತ ತಂದೆ ಯಾವಾಗಲೂ ಕಥೆ ಹೇಳುತ್ತಿದ್ದರು.
ತಟದಲ್ಲಿ ನಿಂತು ಹಣೆಯ ಮೇಲೆ ಕೈ ಇತ್ತು ದೂರದೆಡೆಗೆ ಕಣ್ಣು ಹಾಯಿಸಿದೆ , ಸುಶೇಷಣ ತನ್ನ ದೋಣಿಯನ್ನು ದಡದಲ್ಲಿದ್ದ ಮಾಮರಕ್ಕೆ ಕಟ್ಟಿ ಮಾಯವಾಗಿದ್ದ, ಬಹುಶಃ ನಿನ್ನೆ ಬಹಳ ದಣಿದಿದ್ದನೇನೋ ಎದ್ದಿರಲಿಲ್ಲ, ಉಳಿದ ಮೀನುಗಾರರು ಯಮುನೆಯ ಆ ತುದಿಯಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು . ಆ ದಡ ತಲುಪಿಸಲು ಯಾವ ಮಾಯಾವಿ ಬಂದಾನು? ಆದರೆ ನನಗೆ ಅಲ್ಲಿಗೆ ತಲುಪಲೇ ಬೇಕಿತ್ತು. ಅದೂ  ಬಹಳ ತುರ್ತಾಗಿ ರಾಣಿ ರೋಹಿಣಿಯ ಸಂದೇಶ ಹೊತ್ತು , ತಾಯಿ ದೇವಕಿಯನ್ನು ನೋಡಲು, ಮತ್ತೆ ಮೈಯೆಲ್ಲಾ ಪುಳಕಿಸಿತು,ಕೈಯಲ್ಲಿದ್ದ ಗಂಧ ಚಂದನದ ಪೆಟ್ಟಿಗೆ, ಜತೆಗೆ ರಾಣೀವಾಸದವರು ನೀಡಿದ್ದ ಪುಟ್ಟ ಬುಟ್ಟಿ , ಕೈಗಳು ನೋಯಲಾರಂಭಿಸಿತ್ತು
ಇದ್ದಕ್ಕಿದ್ದಂತೆ ಆ ಕಡೆಯಿಂದ ಒಂದು ದೋಣಿ ಇತ್ತ ಬರುತ್ತಿರುವಂತೆ ಕಾಣಿಸಿತು, ಓ ಅದು ಸೈನಿಕರ ದೋಣಿ ಅವರಿಗೆ ಇಲ್ಲೇನು ರಾಜಕಾರ್ಯ, ನನಗರ್ಥವಾಗಲಿಲ್ಲ, ಉಗ್ರಸೇನ ಮಥುರೆಯ ಪಟ್ಟದಲ್ಲಿದ್ದಾಗ ನಂದನನ್ನು ಮತ್ತು ನಂದನ ತಂದೆಯನ್ನು ಪ್ರಾಣಕ್ಕೆ ಸ್ನೇಹಿತರಂತೆ ನೋಡಿದ್ದ, ಆದರೆ ಅವನ ಇದ್ದೊಬ್ಬ ಮಗ ರಾಜ್ಯದ ಮಾನವನ್ನು ಸೂರೆಗೈಯತೊಡಗಿದ, ಸಾಲದು ಅಂತ ತಂದೆಯನ್ನು ಪಟ್ಟದಿಂದ ಕೆಳಗಿಳಿಸಿ ಸ್ವಯಂ ಪಟ್ಟಾಭಿಷೇಕ ಮಾಡಿಕೊಂಡ, ತಂದೆಯ ಸಲಹೆಗಳಿಗೆ ಕಿವಿಗೊಡದೆ, ರಾಜ್ಯದ ಸಾಮಂತರಿಗೆ ಕೊಡಲಾಗುತ್ತಿದ್ದ ಗೌರವ ಮತ್ತು ಮರ್ಯಾದೆ ಕಿತ್ತೆಸೆದು ತೆರಿಗೆ ಮತ್ತು ದಂಡಗಳನ್ನು ಹೆಚ್ಚಿಸಿದ. ಅವನ ಮಾತು ಕೆಳದವರನ್ನು ಮೂಲೆಗೊತ್ತಿದ, ಅಂತೆಲ್ಲಾ ಹಲವಾರು ಕಥೆಗಳು ಆ ದಡದಿಂದ ತೇಲಿ ಬರುತ್ತಿದ್ದವು , ನಾನು ರಾಜಕಾರಣ ಅರಿತವಳಲ್ಲ, ಆದರೂ ನಮ್ಮ ವ್ರಜ ಭೂಮಿಗೆ ಯಾವತ್ತೂ ಕೆಟ್ಟದ್ದು ತಡೆದುಕೊಳ್ಳುವ ಶಕ್ತಿ  ಇರಲಿಲ್ಲ, ಅದು ನಂದ ರಾಜನಂತೂ ರಿಷಿ ಸಮಾನ ರಾಜ, ಆಚಾರ ವಿಚಾರದಲ್ಲಾಗಲಿ ಅವನು ಯಾರನ್ನು ನೋಯಿಸಿದ್ದೆ ಇಲ್ಲ, ಮಕ್ಕಳಿಂದ ವೃದ್ಧರವರೆಗೆ ಅದೇ ಆದರೆ ಅದೇ ಪ್ರೀತಿ, ಅಷ್ಟು ಸಮ ತೂಗುವ ಅವನ ಪ್ರಾಮಾಣಿಕತೆಯನ್ನು ಇತ್ತೀಚಿಗೆ ಕಂಸ ಪ್ರಶ್ನಿಸಲಾರಂಭಿಸಿದ್ದ , ಕಂಸ ನಂದನನ್ನು ಬಲ್ಲದಿದ್ದವನೇನಲ್ಲ , ವಸುದೇವ ನಂದ  ಕಂಸ ಮೂವರ ಗೆಳೆತನ ಹಳೆಯದ್ದೇ, ಯಾವತ್ತೋ ಒಮ್ಮೆ ವಾಸುದೇವ ಕುಂತಿಯನ್ನು ಕಂಸನಿಗೆ ಕೊಟ್ಟು  ವಿವಾಹ ನೆರವೇರಿಸಬೇಕೆಂದುಕೊಂಡಿದ್ದನಂತೆ, ಅವನೋ ಕುಂತಲ ರಾಜ್ಯದ ರಾಜಕುಮಾರನಾದರೂ  ಕಂಸನ ಮೇಲೆ ಅತಿಯಾದ ವಿಶ್ವಾಸ, ಅದೆಲ್ಲವೂ ಈಗ ಮರೆತ ಕಥೆ.

ದೂರದಲ್ಲಿದ್ದ ದೋಣಿ ಹತ್ತಿರಕ್ಕೆ ಬಂದಿತ್ತು , ಅದು ಎರಡೆರಡು ಸೈನಿಕರನ್ನು ಹೊತ್ತು ತಂದಿತ್ತು ಒಬ್ಬ ಕಾಂಗದ , ಮತ್ತೊಬ್ಬ ನಿರೂಪ ಇಬ್ಬರು ಇದು ಎರಡನೇ ಸಲ ಬರುತ್ತಿರುವುದು, ಪಾಪ ಅವರೇನು ಮಾಡಿಯಾರು, ಜೀವಂತ ಇರಬೇಕಾದರೆ  ರಾಜ ಹೇಳಿದ ಕೆಲಸ ಮಾಡಲೇಬೇಕು, ನನ್ನೆದೆಯಲ್ಲಿ ಯಾಕೋ ಅವರಿಗಾಗಿ ತುಸು  ಆರ್ದ್ರ ಭಾವವೊಂದು ಅವತ್ತೇ ಹುಟ್ಟಿತ್ತು, ಹಾಗೆಯೇ ನಂದರಾಜರ ಬಗ್ಯೆ ಕಾಳಜಿಯೂ, ದಡಕ್ಕೆ ದೋಣಿ ಕಟ್ಟಿ ಇಬ್ಬರೂ  ಕಟ್ಟಿ ಹಿಡಿದು ಇಳಿದರು , ನನ್ನ ನೋಡುತ್ತಲೇ ಪರಿಚಿತ ಭಾವವೊಂದು ನಗೆಯಲ್ಲಿ ಕೊನೆಯಾಯಿತು, "ತ್ರಿವಕ್ರೆ, ನಂದರಾಜರು ಲಭ್ಯವಿರುವರೇನು? ನಾವು ಬಂದ  ವಿಷಯ ಅವರಿಗೆ ತಿಳಿಸಬೇಕಿತ್ತು" ಸಣ್ಣದಾದ ನಡುಕವೊಂದು ನನ್ನೇ ಆವರಿಸಿತು, ತಕ್ಷಣ ಎಚ್ಚೆತ್ತು ನುಡಿದೆ"ನನಗೆ ತಿಳಿಯದು, ನೀವು ಅರಮನೆಯ ಹತ್ತಿರ ಹೋಗಿ ಕೇಳಬೇಕು" "ನೀನು ದೋಣಿಗಾಗಿ ಕಾಯುತ್ತಿರುವೆಯಾ ಸಹೋದರಿ, ನಮ್ಮ ವಿಶಂಕು ನಿನ್ನ ಆ ದಡಕ್ಕೆ ತಲುಪಿಸಿ ಬರುವ, ಸರಿಯೆನು?" ನಿರೂಪನ  ದನಿ, ಅದರಲ್ಲಿದ್ದ ನಿಜ ಕಾಳಜಿಗೆ ಕರಗಿದೆ ನಾನು, ನನ್ನ ಯೋಗ್ಯತೆಯನ್ನು ಅರ್ಹತೆಯನ್ನು ಕೇವಲ ನನ್ನ ರೂಪದಿಂದಲೇ ಅಳೆವವರ ಮಧ್ಯೆ ನನಗೆ ಗೌರವಿಸಿ ಅರ್ಥೈಸಿಕೊಳ್ಳುವವರು ಬಹಳೇ ಕಮ್ಮಿ. ಮರು ಮಾತಾಡದೆ ದೋಣಿ ಹತ್ತಿ ಕುಳಿತೆ. ದೋಣಿ ಸಾಗಿತು ಯಮುನೆಯ ನೊರೆ ನೊರೆ ತೆರೆ ಸೀಳುತ್ತ.
(ಮುಂದುವರೆಯುವುದು)

Thursday, July 13, 2017

ಅವನಿಗೆ


ಅವನಿಗೆ ,
ಕೇಳು
ತಣ್ಣನೆಯ ನೀರು ತಲೆಯ ಮೇಲೆ ಬೀಳುತ್ತಿತ್ತು, ಯಾವುದೋ ಜನುಮದ ಪಾಪ ತೊಳೆಯುವಂತೆ ಕಣ್ಣಿಂದ ಜಾರಿದ ಹನಿಯೊಂದು ನೀರ ಜತೆ ಸೇರಿ ಹರಿದು ಹೋಯಿತು ಅದೆಷ್ಟು ಕಣ್ಣ ಹನಿಗಳು ಸೇರಿ ಸಾಗರ ಉಪ್ಪಾಯಿತು? ನಾನು ಕಣ್ಣೊರಸಿ ಬಿಕ್ಕು ತಡೆ ಹಿಡಿದೆ. ಕಾರಣವೇ ಇಲ್ಲದೆ ಬರುವ ಕಣ್ಣೀರು ಒಂದೋ ಸುಖದ್ದು ಕೃತಜ್ಞತೆಯದ್ದು ಮತ್ತೊಂದು ಬಹುಶಃ , ಗತ ಕಾಲದ ನೆನಪುಗಳದ್ದು ಕಹಿಯಾದ್ದು. ನನ್ನ ಕಣ್ಣಿನ ಹನಿ ಅವೆರಡಕ್ಕೂ ಸೇರಿದ್ದಾಗಿರಲಿಲ್ಲ, ನೀರು ಹಿಡಿದಿಟ್ಟ ಮೋಡ ನಾನು , ಸಣ್ಣದ್ದನ್ನು ಸಹಿಸದ ಸೂಕ್ಷ್ಮ ಮನಸ್ಥಿತಿ ಹಾಗಿದ್ದರೆ ಒಳ್ಳೆಯದಿತ್ತೇನೋ , ಆದರೆ ಎಲ್ಲ ಬದಲಾಯಿತು

ಪೂಜೆ  ಮುಗಿಸಿ ಕೂತಾಗ ಏನೋ ಮರೆತಂತನಿಸಿ  ಕ್ಯಾಲೆಂಡರ್ ನೋಡಿದೆ, ಜುಲೈ ಹದಿಮೂರು ಅಂತ ತೋರಿಸುತ್ತಿತ್ತು ತಟ್ಟನೆ ನೆನಪಾಯಿತು ಇವತ್ತು ಅವನ ಜನ್ಮದಿನ , ಒಂದು ಸಣ್ಣ ಸೆಳಕು ಎದೆಯಲ್ಲಿ, ವಾಟ್ಸಾಪಿನಲ್ಲಿ ನೋಡಿದೆ ನನ್ನ ಶುಭೋದಯಕ್ಕೆ ನಿತ್ಯ ಬರುತ್ತಿದ್ದ ಉತ್ತರವಿಲ್ಲ, ಅವನ ಸಣ್ಣ ಮುನಿಸಿಗೆ ಕಾರಣ ನನಗೆ ಗೊತ್ತಿಲ್ಲದ್ದೇನು ಅಲ್ಲ, ಆದರೆ ನಾನು ಸಂಸಾರದ ನೂರು ಬಳ್ಳಿಗಳಲ್ಲಿ ಬಂಧಿತಳು , ಸೆರಗಲ್ಲಿ ಕೆಂಡದಂತ ಬದುಕನ್ನು ಕಟ್ಟಿಕೊಂಡು ನಿತ್ಯ ಒದ್ದಾಡುತ್ತಿರುವವಳು ಯಾವತ್ತೋ ಅದನ್ನು ಕಿತ್ತು ಓಡಿಹೋಗುತ್ತೇನೆ ಎನ್ನುವ ಹುಚ್ಚು ಭರವಸೆಯಲ್ಲಿ ಪ್ರಜ್ಞಾಪೂರ್ವಕವಾಗಿ ಮೋಹವನ್ನು ಮಮತೆಯನ್ನು ಬಟ್ಟೆಯಾಗಿ ಸುತ್ತಿಕೊಂಡವಳು , ಮನಸ್ಸೇನೋ ಸದಾ ಸಂಚಾರಿ ಆದರೆ ನಿತ್ಯ ಕೆಲಸಕ್ಕೆ ಅದನ್ನ ಕಟ್ಟಿ ಹಾಕಲೇ ಬೇಕಲ್ಲ, ಬೇಕೆಂದಾಗ ಬೇಕೆನಿಸಿದವರನ್ನ ನೋಡುವ ಅವಕಾಶ ಅದೆಷ್ಟು ಜನಕ್ಕೆ ಸಿಕ್ಕೀತು ನಾನಂತು ಹುಟ್ಟಾ ಪಾಪಿ ಕಾಲಿಟ್ಟ ಕಡೆ ಮುಳ್ಳು ಮನಸ್ಸಿನ ಹೃದಯಗಳು ಹೂಗಳ ಮುಖವಾಡ ಹಾಕಿ ಚುಚ್ಚುವಾಗಲು ಸಹಿಸಿ ನಾಳೆ ಎನ್ನುವ ಆಶಾವಾದಕ್ಕೆ ಜೋತು  ಬಿದ್ದವಳು ಆದರೆ ಗಂಡು ಎನ್ನುವ ಪ್ರಭೇದದ ಬದುಕು ಈ ಭೂಮಿಯಲ್ಲಿ ಬಹಳ ಸುಲಭವಿದೆ, ಇಷ್ಟೆಲ್ಲಾ ಕಷ್ಟ ಪಡಬೇಕಿಲ್ಲ ಅಲ್ಲವೇ, ಬಹುತೇಕ ಎಲ್ಲ ಸಾರವಜನಿಕ ಮತ್ತು ಖಾಸಗಿ ಜಾಗಗಳಲ್ಲಿ ಜಗತ್ತು ಹೇಗಿದ್ದರೂ ಗಂಡು ಎನ್ನುವ ಪಟ್ಟ ಕಟ್ಟಿ ವಿನಾಯತಿ ಕೊಟ್ಟುಬಿಡುತ್ತದೆ
ನಾನು ಯೋಚನೆಗಳಲ್ಲಿ ಕಳೆದು ಹೋಗಿದ್ದೆ, ನನ್ನ ಮನಸ್ಸು ಮಾತ್ರ ನೋಡ ಬಯಸುತ್ತಿತ್ತು,  ಅವನನ್ನ,ಆದರೆ ನಾನು ನೋಡ ಬಯಸಿದ್ದ ಅವನು ಅವನಾಗೆ ಉಳಿದಿರಲಿಲ್ಲ, ಸುಮ್ಮನೆ ಮುನಿಸು, ನಮ್ಮ ಬದಲಾದ ಬದುಕುಗಳ ಜತೆ ಜತೆಗೆ ಬದಲಾದ ಪ್ರಾಮುಖ್ಯತೆಗಳನ್ನ ಅರ್ಥೈಸದೆ ಹಳೆಯ ನೆನಪುಗಳಿಗೆ ಅದು ಕೊಡುವ ನೋವುಗಳಿಗೆ ನಾನೇ ಕಾರಣ ಅನ್ನುವ ಮಾತು ನನ್ನ ಚುಚ್ಚಿ ನೋಯಿಸುವುದು, ನನಗೆ ನಿಜವೆಂದರೆ ಈ ಜಗತ್ತಿನಲ್ಲಿ ಯಾರು ಬೇಕಿಲ್ಲ, ನೀನೊಬ್ಬ ಸಾಕು ಎನ್ನುವ ನನ್ನ ಮನಸ್ಥಿತಿಯನ್ನ ಮುಚ್ಚಿಡಲು ಪ್ರತಿಬಾರಿಯೂ ಪ್ರಯತ್ನಿಸಿ ಸೋತಿದ್ದೇನೆ,ಮತ್ತೆ ಮತ್ತೆ ಬದಲಾಗುವ ಪರಿಸ್ಥಿತಿಗಳ ನಡುವೆಯೂ ನೀನೊಬ್ಬ ಮಾತ್ರ ಬದಲಾಗದ ಅದೇ ಸ್ಥಾನದಲ್ಲಿ ಹೃದಯದಲ್ಲಿ ಕೂತಿದ್ದೀಯಾ ಎನ್ನಲು ಪ್ರಯತ್ನಿಸಿ ಸೋತಿದ್ದೇನೆ ಕೊನೆಗೆ ಇದೆಲ್ಲವೂ ಹನಂಬಿಕೆ ಇಲ್ಲದ ಅವನಲ್ಲಿ ಹೇಳುವದಕ್ಕಿಂತ ಮೌನಿಯಾಗಿರುವುದೇ ಲೇಸು ಅನ್ನಿಸಿ ಮೌನವು ಆಗಿಬಿಟ್ಟಿದ್ದೇನೆ,
ನದಿ ತನ್ನ ಪಾತ್ರಗಳನ್ನು ಸದಾ ಬದಲಿಸಬೇಕಾಗುತ್ತದೆ,ಭೂಮಿಯ ಏರಿಳತಗಳಿಗೆ ತಕ್ಕಂತೆ ಆದರೆ ಕೊನೆಯ ತನಕವೂ ದಡಗಳೆರಡೂ ನದಿಯೊಡನೆ ಮೌನವಾಗಿ ಪಯಣಿಸುತ್ತದೆ, ನೋವಿನಲ್ಲಿ ನಲಿವಿನಲ್ಲಿ ಅದೇ ತಬ್ಬುಗೆಯಲ್ಲಿ ಸಂತೈಸುತ್ತಾ ಸಾಗರನ ಒಡಲು  ಸೇರುವವರೆಗೂ , ಆ ಮಹಾಯಾತ್ರೆಯಲ್ಲಿ  ನದಿಗೆ ಈ ಸಾಂಗತ್ಯ ಕೊಡುವ ಆತ್ಮಬಲ ಬಣ್ಣಿಸಲಾಗದ್ದು, ನನ್ನ ಚಂದ್ರಮ ಹಾಗೆಯೆ , ಅವನು ಜತೆಗಿರಲಿ ಇಲ್ಲದಿರಲಿ, ಮುನಿಸಿರಲಿ ಸೊಗವಿರಲಿ ಅವನಿರದೆ ಈ ಬದುಕೆಂಬ ನದಿಗೆ ಯಾವದಡಗಳಿಲ್ಲ ನಾನೆಲ್ಲಿ ಹೋದರು ಅವನ ನೆನಪಿನ ಬಾಹುಗಳು ಕಾಳಜಿಯ ಕಣ್ಣುಗಳು ಸದಾ ನನ್ನ ಜತೆಗಿರುತ್ತವೆ, ಜೀವವೊಂದು ಮತ್ತೊಂದು ಜೀವಕ್ಕೆ ದೇಹದ ಅರಿವಿಲ್ಲದೆ ಅಂಟಿಕೊಂಡ ಹಾಗೇ
ಅ ವನೇ, ನಾನು ಉರಿಯುತ್ತಿರುತ್ತೇನೆ , ನಿನ್ನ ಅದೃಶ್ಯ ಸಹಾಯದೊಂದಿಗೆ, ನಿನ್ನ ಮುನಿಸು ಕರಗಲಿ, ಮತ್ತದೇ ಬೆಚ್ಚನೆಯ ಪುಳಕ ಇಬ್ಬರ ಹಾದಿಯಲ್ಲಿ ಚೆಲ್ಲಿಕೊಳ್ಳಲಿ, ನಿನ್ನ ಅರೋಗ್ಯ ನಗು ನನಗಾಗಿಯಾದರೂ  ಸದಾ ನಳನಳಿಸುತ್ತಿರಲಿ
ನಿತ್ಯವೂ ಹುಟ್ಟಿದ ಹಬ್ಬವಾಲಿ
ಇಂತಿ ನಿನ್ನವಳಾಗದ ನಿನ್ನವಳು ಇವಳು

Thursday, December 15, 2016

ಬದುಕೆಂಬ ಬೀಸುಗಲ್ಲು

"ಕೈ ನೋವು ಬಂತೆನಾ ನಿಂಗೆ, ನಾಕೊಳ್ಳು ಹೂರಣ ಬೀಸದು ಸುಲಭದ್ ಕೆಲ್ಸಲ್ಲ, ಏಳು , ಈ ಒಳ್ಳು ಆನೆ ಬೀಸ್ಕೊಡ್ತಿ" ಅಪ್ಪನ ಕಣ್ಣುಗಳನ್ನೆ ನಿಟ್ಟಿಸಿದಳು ನಕ್ಷತ್ರ, ಅಲ್ಲಿ ಕಕ್ಕುಲಾತಿ ಬಿಟ್ಟರೆ ಬೇರೇನಿರಲಿಲ್ಲ, "ಇಲ್ಲೆ ಅಪ್ಪ, ಸುಸ್ತೇನು ಆಗಲ್ಲೆ, ಇನ್ನೊಂದು ಒಳ್ಳಾಗ್ತು ಅಷ್ಟೆಯಾ, ನೀನು ಬ್ಯಾಗ ಪೂಜಿಗೆ ರೆಡಿ ಮಾಡ್ಕ್ಯ" ಎಂದವಳೆ ಬೇಳೆ ಮಿಶ್ರಣವನ್ನ ಹದಾ ಸೌಟಲ್ಲಿ ಒರಳಿಗೆ ದಬ್ಬತೊಡಗಿದಳು, ದೀಪಾವಳಿಯಲ್ಲವೆ ಕೆಲಸದ ಹೊರೆ ಕಾಯುತ್ತಿತ್ತು, ಸೂರ್ಯ ಮತ್ತು ಜಿತುವಿನ ಮಾತು ಜಗಲಿಯಿಂದ ಒಳ್ಳುಕಲ್ಲು ಇಟ್ಟಿದ್ದ ಹಿತ್ತಿಲವರೆಗು ಕೇಳುತ್ತಿತ್ತು, ಹೌದಲ್ಲ, ತೋರಣ ಕಟ್ಟಬೇಕು, ತುರುರೊಟ್ಟಿ ಚೆಂಡು ಶೇವಂತಿಗೆ ಹಾರ ಕೊಟ್ಟಿಗೆ ಯಲ್ಲಿ ನ ಅಷ್ಟೂ ಜೀವಗಳಿಗೆ, ಮೊನ್ನೆ ಬಂದವನೆ ಜಿತು ಅವಕ್ಕೆ ಎಣ್ಣೆ ನೀರು ಹಾಕಿ  ಹೇನು ನೊಣ ತೆಗೆದು ನೀಟಾಗಿ ಸ್ನಾನ ಮಾಡಿಸಿದ್ದ, ಬೆಳ್ಳಿ ದನಕ್ಕೆ ಅವನ ದನಿ ಕೇಳಿದರೆ ಖುಷಿ, ಎರಡು ಸಾರಿ ಹೆಚ್ಚೆ ಅಂಬಾ ಅನ್ನುತ್ತಾಳೆ, ಅಪ್ಪ ಅವುಗಳನ್ನು ಪ್ರಾಣಿಗಳಲ್ಲ ದೇವತೆಯರು ಅನ್ನುತ್ತಿದ್ದ, ಸಮೃದ್ಧ ಹಾಲು ಹೈನು, ಹಸಿರಾದ ತೋಟ ಆದರು ತಾಯಿಲ್ಲದ ತವರು ಸಂಕಟವೆ, ಅಂಟಾಗಿ ಉಂಡೆ ಕಟ್ಟುವ ಹದಕ್ಕೆ ಬಂದು ನುಣ್ಣಗಾದ ಹೂರಣವನ್ನು ತೆಗೆದಳು ನಕ್ಷತ್ರ, ಒಳ್ಳು ಕಲ್ಲಿಗೆ ನೆನೆಯುವಷ್ಟು ನೀರು ಬಸಿದು ಏಳುವ ವೇಳೆಗಾಗಲೇ ಒಳಗಿನಿಂದ " ಈಶಾನ ಸರ್ವ ವಿದ್ಯಾನಾಂ ಈಶ್ವರ ಸರ್ವ ಭೂತಾನಾಂ, ಬ್ರಹ್ಮಾಧಿಪತಿರ್ ಬ್ರಹ್ಮಣೋಧಿಪತಿರ್ ಬ್ರಹ್ಮ, ಶಿವೋಮೆ ಅಸ್ತು ಸದಾ ಶಿವೋಹಮ್" ಅಂತ ಅಪ್ಪನ ಮಂತ್ರ ಧಾರೆಯಲ್ಲಿ ಕಳೆದು ಹೋದಳು ಕೈಗಳು ಯಾಂತ್ರಿಕವಾಗಿ ಕೆಲಸಗಳನ್ನು ಮಾಡುತ್ತಿದ್ದರೆ ಆಕೆ ನೆನಪುಗಳ ಲೋಕದಲ್ಲಿ ಅಮ್ಮನೆದುರು ಕೂತಿದ್ದಳು, ಅದೇ ಅಮ್ಮ, ಆರ್ದ್ರ ಕಣ್ಣಿನ ಗಂಟಲೊಳಗಡೆಯೆ ಹೂತುಹೋಗುತ್ತಿದ್ದ ಮಾತಿನ ಅಮ್ಮ, ಒಟ್ಟು ಕುಟುಂಬದ ಗಾಣದೆತ್ತು, ಕೆಲಸದವರಿಂದಲು ಕೂಡ ಬೋಳೆ ಅಮ್ಮ ಅನಿಸಿಕೊಂಡ ತನ್ನಮ್ಮ, ಎದುರು ಕೂತು ಮಾತಾಡುತಿದ್ದಳು" ಬ್ಯಾಡ ಕೂಸೆ, ನಿಂಗವ ಇಷ್ಟ ಹೇಳಿ ಸೈತ ಯಾರೆದ್ರಿಗು ಹೇಳಡ, ಮದ್ಲೆ ಮನೆಲಿ ನಿಮ್ಮಪ್ಪ ಕೋಲೆಬಸವ, ಆನು ದನಿ ಹೂತ್ ಹೋದೋಳು, ನಿನ್ ಬೆನ್ನಿಗೊಬ್ಬ ತಮ್ಮ ಇದ್ದ ಹೇಳಿ ಮರೆಯಡ, ಆನಂತು ಈ ಸಂಸಾರಕ್ಕೆ ತೇದು ತೇದು ಜೀವ ಹೈರಾಣ ಮಾಡ್ಕ್ಯಂಡಿ, ಆದ್ರು ಮಾತು ಕೇಳದು ತಪ್ಪದಿಲ್ಲೆ, ನೀ ಮತ್ತೆ ನಂಗಳ ತಲೆ ಮ್ಯಾಲೆ ಚಪ್ಪಡಿ ಕಲ್ಲು ಹಾಕಡ, ಆನಂತು ಬದ್ಕದಿಲ್ಲೆ, ಜನ ಮಾತು ಕೇಳೇ ಕೇಳೆ ಸತ್ತೋಗ್ತಿ" ಆಕೆಯ ಕಣ್ಣುಗಳು ಆಹ್, ಅದು ಕಣ್ಣಲ್ಲ ಸಾಗರ, ಪೂರ್ತಿ ನೀರು ತುಂಬಿತ್ತು, ತನಗೆ ವಿಚಿತ್ರ ಅನ್ನಿಸಿತ್ತು, ಯಾರೋ ಜನಕ್ಕಾಗಿ ಅಮ್ಮ ತನ್ನ ಮಗಳಬಲಿ ಕೊಡುತ್ತಾಳೆ ಜೀವ ತೆಗೆದುಕೊಳ್ಳುತ್ತಾಳೆ ಅನ್ನುವುದು ಅತ್ಯಂತ ಸೋಜಿಗ ತರುವ ವಸ್ತುವಾಗಿತ್ತು, ಜತೆಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು, "ಬೇರೆ ಯಾರ್ಜೊತಿಗಾದ್ರು ಎನ್ ಮದ್ವೆ ಆಗದಾದ್ರೆ ನಾನೆ ಹೋಗಿ ಚೌಡಿ ಹೊಳಿಗೆ ಹಾರ್ಕತ್ತಿ, ಈ ಮಗಳು ನಿಂಗಳ್ ಪಾಲಿಗೆ ಸತ್ತೋದ ಅಂದ್ಕಳಿ" ಅಂದವಳೆ ಎದ್ದು ಮೆತ್ತು ಹತ್ತಿ ಧಡಾರ್ ಅಂತ ಬಾಗಿಲಿಳೆದುಕೊಂಡಿದ್ದೆ ತಾನು, ಅಮ್ಮನ ಸ್ವಭಾವವೆ ಅದಾಗಿತ್ತಾ? ಮೊದಲನೆಯ ಸೊಸೆ, ಮೂರು ಜನ ಅಣ್ಣ ತಮ್ಮಂದಿರು ಇರುವ ಮನೆಗೆ ಅಮ್ಮ ಎರಡು ಹಸು, ಒಂದು ಒಳ್ಳ್ಕಲ್ಲು ಒಂದು ಟ್ರಂಕು ಹಿಡಿದು ಗೃಹ ಪ್ರವೇಶ ಮಾಡಿದವಳು, ಅತ್ತೆ ಮಾವ ಇಬ್ಬರು ಇಲ್ಲದ ಸಂಸಾರಕ್ಕೆ ದಿಕ್ಕಾದವಳು, ಅಪ್ಪನೋ ಬೋಳೆಶಂಕರ, ತಮ್ಮಂದಿರು ಮದುವೆಯಾದರು, ಅವರ ಹೆಂಡದಿರಿಗೆ ಪೇಟೆಯ ಹುಚ್ಚು, ಒಬ್ಬಳು ಸದಾ ಸಾಗರದ ತವರುಮನೆಯಲ್ಲಿ ಝಾಂಡ, ಮತ್ತೊಬ್ಬಳು ಕೋಣೆಯಿಂದ ಕೆಳಗಿಳಿಯುತ್ತಿರಲಿಲ್ಲ, ಅವರಿವರ ಮಾತುಗಳು ಅಮ್ಮನ ಕಿವಿಯಲ್ಲಿ ಅದ್ಹೇಗೆ ಬೀಳುತ್ತಿತ್ತೋ, ,,"ಜನ ನೂರ್ ಹೇಳ್ಲಿ, ನಂಗವು ನಿಯತ್ತಲಿದ್ವಲ, ದೇವ್ರು ಕಾಯ್ತ, ಸುಮ್ನಿರು" ಅಂತ ಸಮಾಧಾನಿಸುತ್ತಿದ್ದ  ಅಪ್ಪನ ಮಾತುಗಳು ಅವಳೆದೆಗೆ ನಾಟುತ್ತಲೆ ಇರಲಿಲ್ಲ, ಸದಾ ಯೋಚನೆಯಲ್ಲಿಯೆ ಇರುತ್ತಿದ್ದಳು,  ತನಗು ಸದಾ ಅದೇ ಉಪದೇಶ" ಜನ್ರ ಬಾಯಿಗೆ ಶಿಕ್ಕಡ ಕೂಸೆ, ಜೀವ ಇದ್ಹಾಂಗೆ ಸಾಯಿಸ್ಬುಡ್ತ, ಒಳ್ಳೆ ಕಡಿಗೆ ನಿನ್ ಮದ್ವೆ ಆದ್ರೆ ಸಾಕು" ವಿಧಿಯ ಆಟ ಬೇರೆಯೆ ಇತ್ತು, ಹತ್ತು ವರ್ಷದಿಂದ ಪರಿಚಿತ ಕೈಸಾಲಿನ ಹುಡುಗ ಸೂರ್ಯನ ಸ್ನೇಹ ಸೆಳೆಯತೊಡಗಿತ್ತು, ಅವನು ಡೆಲ್ಲಿಗೆ ಹೊರಟು ನಿಂತಿದ್ದ, ತಾನು ನಿರ್ಧಾರ ಮಾಡುವಂತದ್ದೇನಿತ್ತು, ಜಾತಿಯವನೆ, ಮನೆಯಲ್ಲಿ ಅನುಕೂಲಸ್ಥ, ಅದೆಲ್ಲಕ್ಕಿಂತ ತಾನು ಒಲಿದದ್ದು ಅಪ್ಪನ ಸ್ವಭಾವಕ್ಕು ಅವನ ಸ್ವಭಾವಕ್ಕು ಇದ್ದ ಸಾಮ್ಯತೆಗೆ, ಅಮ್ಮನಿಗೆ ಅದೂ ಒಂದಿ ಮರ್ಯಾದೆ ತೆಗೆಯುವ ವಿಷಯವಾಗಿತ್ತು, ಯಾಕೆಂದರೆ ಅವ ಸಗೋತ್ರ, ಸಗೋತ್ರದ ಸಂಬಂಧಗಳು ಅಣ್ಣ ತಂಗಿ ಅಂತಾನೆ ಪರಿಗಣಿಸಲ್ಪಡುತ್ತದೆ ಅಂತ ಚಿಕ್ಕಪ್ಪಂದಿರು ಮಾತಾಡುತ್ತಿದ್ದದ್ದು ತಾನೂ ಕೇಳಿಸಿಕೊಂಡಿದ್ದಳು, ಅವರಿಗೂ ಹೆಣ್ಮಕ್ಕಳಿದ್ದರು ಎನ್ನುವುದನ್ನು ಮರೆತಂತೆ ಅವರು ಮಾತಾನಾಡುತ್ತಿದ್ದ ಪರಿ ತನ್ನ ಹಟವನ್ನು ಇನ್ನೂ ಹೆಚ್ಚಿಸಿತ್ತು, ಆ ಸಮಯದಲ್ಲಿ ಅಪ್ಪ ಜತೆ ನಿಂತಿದ್ದ, ಮಠದವರು ಸಗೋತ್ರ ವಿವಾಹ ನಿಶ್ಚಯಿಸಿದ್ದಕ್ಕೆ ಸೀಮೆಯ ಜನರನ್ನೆಲ್ಲ ಕರೆದು ಅವರೆದುರು ಅಪ್ಪನಿಗೆ ಛೀಮಾರಿ ಹಾಕಿದ್ದರು, ಆದರೆ ಅಪ್ಪನ ಮಾತೊಂದೆ" ನನ್ನ ಮಗಳು ಯಾವ ತಪ್ಪು ಮಾಡಿಲ್ಲ, ಅವಳಿಷ್ಟ ಪಟ್ಟರೆ ಹೊಲೇರ ಹುಡುಗಂಗೆ ಕೊಟ್ಟು ಬೇಕಾದರೆ ಮದುವೆ ಮಾಡತ್ತಿನಿ' ಅಪ್ಪನಲ್ಲೊಂದು ಅಂತ ಮನಸ್ಥಿತಿ ಇದ್ದದ್ದು ತನಗೆ ಗೊತ್ತಾದದ್ದೆ ಅವಾಗ, ತಾನು ರೂಪದಲ್ಲೆನೊ ಅಪ್ಪನ ಪಡಿಯಚ್ಚು ಆದರೆ ಕಣ್ಣುಗಳು ಮಾತ್ರ ಅಮ್ಮನವೆ ಅಂತ ಅಪ್ಪಯಾವಾಗ್ಲು ಹೇಳ್ತಿದ್ದರು, ಅಪ್ಪ ಗಟ್ಟಿ ನಿಂತು ಮದುವೆ ಮಾಡಿಸಿದರು, ಆದರೆ ಅಮ್ಮ ಮನಸ್ಪೂರ್ವಕ ಆಶೀರ್ವಾದ ಮಾಡಲೆ ಇಲ್ಲ, ಕೊಂಡಿ ಕಳಚಿದ ಬೇರಾದ ತಾನು ಪೇಟೆಗೆ ಬಂದೆನಾದರು ಮತ್ತೆ ಮನೆಯ ಸಂಪರ್ಕ ದಕ್ಕಲೆ ಇಲ್ಲ, ಆದರೆ ಜಿತು ಎಸ್ ಎಸ್ ಎಲ್ ಸಿ ಮುಗಿಸಿದವ ಬೆಂಗಳೂರಲ್ಲಿ ಪಿಯುಸಿ ಓದತಿದ್ದಾನೆ ಅಂತ ಊರಗೌಡರ ಮಗ ಪ್ರಶಾಂತ ಸಿಕ್ಕಿದಾಗ ಹೇಳಿದ್ದ, ತನ್ನ ಮನಸ್ಥಿತಿಯ ಅರಿವಿದ್ದ ಸೂರ್ಯ ತನ್ನ ಜತೆಗೆ ಬಂದು ಕಾಲೇಜು ಹುಡುಕಿದ್ದ, ತಾನು ಬರುವಾಗ ಐದನೆ ತರಗತಿಯಿದ್ದ ಮುದ್ದು ಕೆನ್ನೆಯ ತಮ್ಮ ತನ್ನೆತ್ರಕ್ಕೆ ಬೆಳೆದಿದ್ದು ನೋಡಿ ಖುಷಿಯಾಗಿತ್ತು ತನಗೆ, ಅವನು ಅಷ್ಟೇ ನಿಧಾನಕ್ಕೆ ಅದೇ ಸಲಿಗೆ ಪ್ರೀತಿಗೆ ಮರಳಿದ್ದ, ಮನೆಯ ಸುದ್ದಿಯೆಲ್ಲ ತಿಳಿದಿತ್ತು, ಚಿಕ್ಕಪ್ಪನ ಮೊದಲನೆ ಮಗಳು ಸ್ವಾತಿ ವಿದೇಶಕ್ಕೆ ಗೌಡರ ಹುಡುಗನೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡು ಹಾರಿದ್ದನ್ನು, ಮತ್ತೊಬ್ಬ ಚಿಕ್ಕಪ್ಪನ ಒಂದೇ ಮಗಳು ಗ್ಯಾರೇಜಿನ ಅನ್ವರನೊಂದಿಗೆ ಓಡಿಹೋಗಿ ಕಾಣೆಯಾದ ಸುದ್ದಿಗಳು ತನ್ನ ತಲುಪುತ್ತಲೆ ಇದ್ದವು, ಅಮ್ಮ ಸದಾ ತನ್ನ ಸುದ್ದಿ ಮಾತಾಡುವ ಸಂದರ್ಭದಲ್ಲಿ ಕಣ್ಣು ತುಂಬಿಕೊಳ್ಳುವುದನ್ನು ಕೇಳಿದಾಗಲೆಲ್ಲ ತನಗೆಷ್ಟು ಬಾರಿ ಓಡಿ ಹೋಗಿ ತೆಕ್ಕೆ ಬೀಳಬೇಕೆಂದನಿಸಿರಲಿಲ್ಲ, ಆದರೆ ಅದೇ ಸಮಯಕ್ಕೆ ಸೂರ್ಯನ ಕೆಲಸ ಅಮೆರಿಕಾದಲ್ಲಿ ಒಂದು ವರ್ಷದ ಕಾಂಟ್ರಾಕ್ಟ್ ಮೇಲಾಗಿತ್ತು,ಅವನನ್ನ ಕಳಿಸಿ , ಮನೆಗೆ ಮೊದಲ ಬಾರಿ ಹೊರಟು ನಿಂತಾಗ, ಅಮ್ಮನ ನೋಡುವ ಕಾತರವಿತ್ತು, ಅದೇ ಕಾತರದಲ್ಲೆ ಬಂದವಳಿಗೆ ಸಿಕ್ಕಿದ್ದು ನಿಸ್ತೇಜ ಅಮ್ಮ, ಸಣ್ಣ ದನಿಯಲ್ಲಿ ವಿಚಾರಿಸಿದ್ದಳು " ಅಂತು ಬಂದ್ಯಲ್ಲ, ಎಷ್ಟ್ವರ್ಷಾತೆ ನಿನ್ ಮದ್ವೆ ಆಗಿ? ಸ್ವಾತಿ ಬಸುರಿಯಡ, ನಿಂಗೆ ಇನ್ನು ಸುದ್ದಿ ಇಲ್ಲೆ, ಚೆಕ್ ಮಾಡ್ಸಕ್ಕಾಯಿತ್ತು, ಅವ ಚೆನಾಗಿದ್ನ ನಿನ್ನತ್ರ, ಮನೆ ತಗಳ್ಳಲ ಇನ್ನೂ? ಸ್ವಾತಿಯವು ಬೆಂಗಳೂರಲಿ ಮನೆ ತಗಂಡ್ವಡ, ಎಂಗೊತ್ತಿಲ್ಯಪ, ನಿಮ್ ಚಿಕ್ಕಿ ಹೋಗಿತ್ತು ಹಂಗಾಗಿ ಹೇಳ್ದಿ, ಅಷ್ಟೇ " ಅಂತೆಲ್ಲ ತನಿಖೆ ಶುರು ಮಾಡಿದಾಗ ಎಷ್ಟು ಮನಸ್ಸಿಗೆ ನಿರಾಸೆಯಾಗಿತ್ತು, ಮನೆಗೆ ತಂದ ಫ್ರಿಜ್ಜು ವಾಶಿಂಗ್ ಮಷೀನು, ಮಿಕ್ಸಿ ಎಲ್ಲ ತೋರಿಸಿ ಅದೆಲ್ಲ ಸ್ವಾತಿಯೆ ಕೊಟ್ಟದ್ದು ಅಂದಾಗ ಇನ್ನು ಒಂಥರಾ ಅನಿಸಿತ್ತು ತನಗೆ, ಹೌದು ಸೂರ್ಯ ತಾನು ದೇಶ ಸುತ್ತಿದ್ದೆವು, ಇಬ್ಬರು ಮಗುವಿನ ಬಗ್ಗೆ ಯೋಚಿಸಿರಲಿಲ್ಲ, ಅದಕ್ಕೆ ಸರಿಯಾಗಿ ದೋಷಗಳೆ ಇಲ್ಲದಿದ್ದರು ಮಕ್ಕಳಾಗಿರಲಿಲ್ಲ, ಮನೆಯ ಬಗ್ಗೆ ಇಬ್ಬರಿಗೂ ಅಂತಹ ವ್ಯಾಮೋಹ ಇರಲಿಲ್ಲ" ಆಗ ಕಾಲಕ್ಕೆ ಆಗ್ತು ಬಿಡು ಪುಟ್ಟಿ, ಅಮ್ಮನ್ ಮಾತು ಮನಸಿಗೆ ತಗಳಡ" ಅಂದ ಅಪ್ಪನನ್ನ ಅಪ್ಪಿ ಅತ್ತಿದ್ದೆ ತಾನು, ಅಮ್ಮನಿಗೆ ಅಷ್ಟು ಸೂಕ್ಷ್ಮ ಇಲ್ಲದೆ ಹೋಯಿತೆ? ಯಾಕೆ ಹೀಗೆ ಈ ಅಮ್ಮ? ತನಗೆ ಅರ್ಥವೆ ಆಗಿರಲಿಲ್ಲ, ಮತ್ತೆ ಹೋಗುವದಕ್ಕು ಮನಸಾಗಲಿಲ್ಲ ತನಗೆ ಅದಾಗಿ ಒಂದೇ ವರ್ಷಕ್ಕೆ ಅಮ್ಮ ಮೂಳೆ ಸವೆತಕ್ಕೊಳಗಾಗಿ ಹಾಸಿಗೆ ಹಿಡಿದ ಸುದ್ದಿ ಕೇಳಿ ಓಡಿ ಬಂದಿದ್ದೆ ತಾನು ಸೂರ್ಯ ನೊಂದಿಗೆ, ಉಳಿಸಿಕೊಳ್ಳಲಾಗಲೆ ಇಲ್ಲ, ಅವಳ ಕೊನೆಯ ಮಾತುಗಳು ಇನ್ನೂ ಕಿವಿಯಲ್ಲಿ ಸುತ್ತುತ್ತಿವೆ"ಮಕ್ಕಳು ಬೇಕೆ ಬೇಕು ಕೂಸೆ, ನಿಂಗಕ್ಕಾಗ್ಲೆ ಅಂದ್ರೆ ದತ್ತು ತಗಳಿ, ಜಿತುಗೆ ಒಳ್ಳೆ ಅವ ಇಷ್ಟ ಪಡ ಹುಡ್ಗಿನೆ ಮದ್ವೆ ಮಾಡಿ, ಎಂತಕ್ಕು ಯೋಚನೆ ಮಾಡಡ, ಎರಡೆಳೆ ಸರ ನಿಂಗೆ ಮತ್ತೆ ಬರ ಸೊಸೆಕೂಸಿಗೆ ಮಾಡ್ಸಿದ್ದಿ, ಇನ್ನು ಆನು ಉಳಿತ್ನಲ್ಲೆ, ಎಂಗೆ ಗೊತ್ತಾಯ್ದು, ಹಾ, ನಿಂಗೊಂದು ವಿಷಯ ಹೇಳಕ್ಕು, ನೀನು ಹುಟ್ಟಿದ್ದು ಒಳ್ಳುಕಲ್ಲು ಪೂಜೆ ದಿನ, "ಗಳೆಗೆಮಟ್ಟಿ" ಗೆ ಪ್ರತಿ ವರ್ಷ ದೀಪಾವಳಿ ಪೂಜೆ ತಪ್ಸಡ, ಒಳ್ಳೆದಾಗ್ತು" ಅದಾಗಿ ನಾಲ್ಕೆ ದಿನಕ್ಕೆ ತವರು ಖಾಲಿಯಾಗಿತ್ತು, ದುಃಖ ಹೊತ್ತ ಹಿತ್ತಿಲ ತುಂಬೆಲ್ಲ ಅಮ್ಮನೆ ಇದ್ದಾಳೆ ಎನಿಸಿಬಿಟ್ಟಿತ್ತು, ಈ ಮಾತಿಗೀಗ ಎರಡನೆ ವರ್ಷ, ಭೂಮಿ ಹುಣ್ಣಿಮೆ ದಿನ ಅಮ್ಮ ದೂರವಾಗಿದ್ದು, ದೀಪಾವಳಿ ಅಲ್ಲಿಂದ ಬರೀ ಎರಡು ವಾರಕ್ಕಿಂತ ಕಮ್ಮಿ ದಿನಗಳು, ಇವತ್ತು ತಾನಿಲ್ಲಿ ಅವಳ ಜಾಗದಲಿ ಕೂತು ಅವಳಂತಾಗದ ಮನಸ್ಥಿತಿಯಲ್ಲಿ ಪೂಜೆಗೆ ಅಣಿ ಮಾಡುತ್ತಿದ್ದೇನೆ ಎಂತ ಕಾಲ, ಯಾವುದನ್ನು ಬದಲಾಯಿಸಿಬಿಡುತ್ತದೆ, " ಅಂದುಕೊಂಡಳು ನಕ್ಷತ್ರ, ಹಬ್ಬದ ಸಡಗರ ಗಳಿಗೆ ಮಟ್ಟಿಯ ಪೂಜೆ ಮಾಡಿ ಬಲಿರಾಯನನ್ನು ರಾತ್ರಿ ದೀಪಗಳ ಮೆರವಣಿಗೆಯಲ್ಲಿ ಕಳಿಸಿಕೊಟ್ಟು ಮುಗಿಯಿತು, ಮರುದಿನ ಹಾಯಾಗಿ ಕಾಲುಚಾಚಿ ಎಲ್ಲ ಜಗಲಿ‌ಕಟ್ಟೆಯ ಮೇಲೆ ಕೂತಾಗ  
ನಕ್ಷತ್ರ ನುಡಿದಳು"ಅಪ್ಪ, ಎರಡು ವಿಷಯ ಮಾತಾಡಕ್ಕು,ಈಗ ಮಾತಾಡಲಡ್ಯಿಲ್ಲ್ಯ?" ಅಪ್ಪ ಮುಗುಳ್ನಕ್ಕು ನುಡಿದರು"ಮದಲ್ನೆ ವಿಷ್ಯ ಎಂಗೊತ್ತಾಯ್ದು, ಎರಡನೆದು ಹೇಳು" ನಾಚಿಗೆಯ ತೆರೆಯಲ್ಲಿ "ಹು ನಂಗೆ ನಾಕು ತಿಂಗಳು ಈಗ , ಅಪ್ಪ, ಜಿತು ಮದ್ವೆಯಾಗಿದ್ರೆ ಈ ಮನೆಗೊಂದು ದಿಕ್ಕಾಗ್ತಿತ್ತು, ನಂಗವು ಇಲ್ಲೆ ಅರಿಶಿನಗೇರಿಲಿ ತೋಟ ಮನೆ ತಗತ್ಯ, ನಿಂಗೆ ಹತ್ರ ಇದ್ದಾಂಗಾತು ಹೇಳಿ ಸೂರ್ಯ ಅವರಪ್ಪ ಅಮ್ಮ ಎಲ್ಲ ತೀರ್ಮಾನ ತಗೈಂದ, ಇನ್ನು ಒಂದ್ವಿಷ್ಯ ಇದ್ದು, ಎನ್ನ ಮನೆಯವರ ಆಫೀಸು ಗೆಳೆಯನ ಮಗಳು ಒಂದಿದ್ದು, ಅದಕ್ಕೆ ಹಳ್ಳಿ ಜೀವನವೆ ಬೇಕಡ, ಜಿತುಗೆ ಮುವತ್ತೆರಡು ಅದಕ್ಕೆ ಇಪ್ಪತ್ತೇಳಾತು, ಜಾತಿ ಸಲ್ಪ ಬೇರೆದೆ ಆಗ್ತು ಆದ್ರೆ ಹುಡ್ಗಿ ಒಳ್ಳೆದೆ, ಹೆಂಗು ನಮ್ಮನೆ ಅಪ್ಪಿ ಇಲ್ಲೆ ಕೆಲಸ , ಒಳ್ಳೆ ಜೋಡಿ, ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದ, ನೀ ಹೂ ಅಂದ್ರೆ ಕರ್ಕಬತ್ತಿ ಮುಂದಿನ್ವಾರ" ಅಪ್ಪನ ಕಣ್ಣು ಪಸೆಗಟ್ಟಿತು ಅನಿಸಿತಾ? "ಆಗ್ಲಿ, ಹೆಣ್ಣು ಗಂಡು ಒಪ್ಪಿದ್ದ ಅಂದ್ಮೇಲೆ ನಂದೇನಿದ್ದು, ಕೂತ್ಕ ಬಾ ಇಲ್ಲಿ" ಅಂದ ಅಪ್ಪನ ಪಕ್ಕ ಕೂತಳು ನಕ್ಷತ್ರ, ಅಪ್ಪನ ಕೈ ಮಗಳ ತಲೆ ಸವರುತ್ತಿತ್ತು, ಮಗ್ಳೆ ಹೆಣ್ಮಕ್ಕಳು ಹೃದಯ ಒಳ್ಳುಕಲ್ಲು ಇದ್ದಂಗೆ, ನಾವೇನ್ ಪದಾರ್ಥ ಹಾಕ್ತು ಅದನ್ನ ತಿರುಳು ಸಮೇತ ಅರೆದು ರುಚಿಯಾಗಿ ಮಾಡ್ತ ಬದುಕನ್ನ, ನೀನು ನಿನ್ನಮ್ಮನ ತರ ದ್ವಂದದಲ್ಲಿ ಬದುಕ್ಲೆ, ನನ್ ತರ ಎಲ್ಲದನ್ನು ಒಪ್ಕ್ಕ್ಯಂಡು ಬದುಕ್ಲೆ, ಜೀವ್ನ ಅಂದಮೇಲೆ ಎಲ್ಲದು ಇರ್ತು, ನಿನ್ನ ಚಿಕಪ್ಪದಿಕ್ಕಳು ಇವತ್ತು ಬತ್ವಡ ಊಟಕ್ಕೆ, ರೆಡಿ ಮಾಡನ ಏಳು, ಸೂರ್ಯನ್ನ ಕರಿ, ಪೂಜೆ ಮಾಡ್ಲಿ ಅವ, ಆ ಕಾಲಕ್ಕೆ ಆ ನಿಯಮಗಳು ಈ ಕಾಲಕ್ಕೆ ಇದೆ ಸತ್ಯ, ಹತ್ತು ವರುಷಕ್ಕೊಂದ್ಸಾರಿ ಸಮಾಜದ ಕಟ್ಟಳೆ ಎಲ್ಲ ಅಷ್ಟಷ್ಟು ಬದಲಾಗ್ತಾ ಹೋಗ್ತು, ಹೊಸದೆಷ್ಟೆ ಬಂದರು ಹಳತು ಚೂರುಪಾರು ಇರವು, ಅವಾಗ್ಲೆ ಚೆನ್ನ " ಅಂತ ಮುಗುಳ್ನಕ್ಕ ಅಪ್ಪನ ಕಣ್ಣಲ್ಲಿ ಅಮ್ಮನ ಹೊಸ ಅವತಾರ ಕಂಡು ಕಣ್ಣು ತುಂಬಿತು ನಕ್ಷತ್ರ ಳಿಗೆ

Saturday, July 9, 2016

ಹೆಸರಿಲ್ಲದ ಕಥೆ

ಯು.ಬಿ.ಸಿಟಿಯ ಬಿಯರ್ರೆ ಲೌಂಜಿನಲ್ಲಿ ಎರಡು ಮನಸುಗಳು ಬೀರಿನ ಜತೆ ಬಿಕ್ಕುತ್ತಿದ್ದವು, ಒಂದು ವಿದೇಶದ್ದು, ಮತ್ತೊಂದು ಅಪ್ಪಟ ಸ್ವದೇಶಿ, ಸೂಕ್ಷ್ಮ ಗಮನಿಸಿದರೆ ಅವೆರಡೂ ರೋಗಪೀಡಿತ ವಾದವು ಅಂತ ಎಲ್ಲರಿಗೂ ಗೊತ್ತಾಗುತ್ತಿತ್ತು, ಎದುರು ಮೂಲೆಯವನು ಅದಾವುದೋ  ಅರಿಸಿನದ ದ್ರವವನ್ನು ಕುಡಿಯುತ್ತಾ ಹಲುಬುತ್ತಿದ್ದ"bro I left the new York for her bro, she told me to be vegan, see now am pure vegan, I don't eat meat, I left my favorite beef, am ready to put that holy thread also " ಅವ ಹಲುಬುತ್ತಿದ್ದರೆ ಇವ  ಹೇಳುತ್ತಿದ್ದ, " ನನ್ನಮಗನೆ, ನಮಗೆ ಬುದ್ದಿ ಇಲ್ಲ, ನೀನು ತಿನ್ನೋದು ಬಿಟ್ಟೆ ನಾನು ಅವಳಿಗಾಗೆ ಕಲಿತೆ, ನೋಡು ಮೇಲೆ ಹೋಗಿ ಒಬ್ಬಳೇ ಕುಣೀತಿದ್ದಾಳೆ ಹೊಸಬರು ಯಾರಾದರೂ ಸಿಕ್ಕುತ್ತಾರೆ " ಅವನು ತಣ್ಣನೆಯ ದ್ರವವನ್ನು ಗುಟುಕರಿಸಿ  ತಲೆ ತಗ್ಗಿಸಿದ್ದ, ಆ ಕತ್ತಲ ಮೂಲೆಯಲ್ಲಿ ಕುಳಿತ ಅವಳು ಸುಮ್ಮನೆ ಕೈಲಿರುವ ಸಿಗರೇಟನ್ನು ನೋಡಿ ನಗುತ್ತಿದ್ದಳು, "life is paradox, ಅದಿಲ್ಲ ಅಂದರೆ ಇಡೀ ಜಗತ್ತನ್ನು ಧಿಕ್ಕರಿಸಿ ಈ ಬ್ರಾಹ್ಮಣ ಹುಡುಗನ್ನ ನಾನ್ಯಾಕೆ ಮದುವೆಯಾಗಬೇಕಿತ್ತು, ನಾನಿವನಿಗೆ ಕುಡಿಯುವುದು ಮಾಂಸ ತಿನ್ನುವುದು ಕಲಿಸಿದೆನಾ, ಅಷ್ಟಕ್ಕು ಆ ಸಮಯದಲ್ಲಿ ಅದೆಲ್ಲ ಯಾವ ಲೆಕ್ಕಕ್ಕಿಲ್ಲದ ವಿಷಯಗಳು, ಅವನು ಕಲಿತಿದ್ದು ಇದನ್ನು ಮುಂಚೆ, ಶೋಕಿಗೆ, ತಾನಿವನಿಗಾಗಿ ಸಂಸ್ಕೃತ ಕಲಿತೆ ಶ್ಲೋಕ ಕಲಿತೆ, ಹಾಳಾದ್ದು ಸಿಗರೇಟು ಒಂದು ಬಿಟ್ಟರೆ ಇನ್ ಯಾವ ದುರಭ್ಯಾಸ ಇಲ್ಲ ತನಗೆ, ಅದು ಹೇಗೆ ಸುಳ್ಳನ್ನೆ ಕುಡಿಯುತ್ತಾನೆ ಅವ ದಿನಾಲು ಸೋಜಿಗ ತನಗೆ, ಹತ್ತು ಬಾರಿ ಹೇಳಿದರೆ ಸುಳ್ಳು ಸತ್ಯವಾಗುತ್ತದಂತೆ, ಇದೂ ಅದೆ ಇರಬಹುದು ಅಂದವಳಿಗೆ ಅವನ ಎದುರು ಕೂತ ವಿದೇಶಿ ಇಷ್ಟವಾಗತೊಡಗಿದ್ದ, ಯಾವ ದೇಶವೊ ಏನೋ ಇಲ್ಲಿ ಬಂದು ಅವಳಿಗಾಗಿ ಎಲ್ಲ ತ್ಯಾಗ ಮಾಡಿದ ಅವನು ಗ್ರೇಟ್ ಅನ್ನಿಸತೊಡಗಿದ, ಆದರೆ ಅಲ್ಲಿಂದ ಮಿಸುಕಲಿಲ್ಲ ಅವಳು, ಈ ಮೂವರನ್ನು ಸಾಮಾನ್ಯವಾಗಿ ಅಲ್ಲಿಯೆ ನೋಡುತ್ತಿದ್ದ ಪಕ್ಕದ ಅಸಾಮಿಗೆ ಜೋರಾದ ನಗು ಬರುತ್ತಿತ್ತು , "ಕುಡಿಯೋದಿಕ್ಕೆ ಕಾರಣ ಬೇಕಾ, ಸುಳ್ಳು, ಮೊದಮೊದಲು ಕಾರಣ ನಮ್ಮನ್ನು ಹುಡುಕತ್ತೆ, ಆಮೇಲಾಮೇಲೆ ನಾವೆ ಹುಡುಕ್ಕೊಳ್ಳೋದು, ಅದು ಮುಗಿದ ಮೇಲೆ ತನ್ನ ತರಾ, ಸುಮ್ಮನೆ ಕುಡಿಯುವುದು" ಲೌಂಜಿನ ಸೀಟುಗಳೆಲ್ಲ ಭರ್ತಿಯಾಗಿದ್ದವು, ದೊಡ್ಡ ಮಗ್ಗಿನಲ್ಲಿ ಕಾಣುತ್ತಿದ್ದ ದ್ರವದಲ್ಲಿ ಸಂಜೆ ರಾತ್ರಿಗೆ‌ ಕೆಂಪಾಗತೊಡಗಿತ್ತು, ಮತ್ತು ಗಾಳಿಯಲ್ಲಿದ್ದ ನಶೆಗೆ ಸತ್ಯ ಸುಳ್ಳಾಗಿಯು ಸುಳ್ಳು ಸತ್ಯವಾಗಿಯು ನಿಚ್ಚಳವಿಲ್ಲದ ಅಲ್ಲಿಯ ಜಗತ್ತು ಅಮಲಿನಲ್ಲಿ ಲೀನವಾಗತೊಡಗಿತ್ತು, ಸದ್ದು ಮರೆಯಾಗಿ ಮಾತಾಡಬೇಕಾದ್ದು ಇನ್ನೇನೋ ಆಗಿ ಸುತ್ತಲಿನ ವಾತಾವರಣದಲ್ಲಿ ಸುಟ್ಟುಕೊಂಡ ಹೃದಯಗಳು ಮತ್ತೆಂದು ಸರಿಯಾಗಲಾರದಂತೆ ಬಣ್ಣಬಣ್ಣದ ದ್ರವಗಳಲ್ಲಿ ಮುಳುಗುತ್ತಾ ತೇಲುತ್ತಾ ಮೈ ಮರೆತಿದ್ದವು😊

ಅವಳು

ನನಗೆ ತಲೆ ಸುತ್ತುತ್ತಿತ್ತು, ಸುತ್ತ ನಡೆಯುತ್ತಿದ್ದ ಯಾವ ವಿದ್ಯಮಾನವೂ ನನಗೆ ತಲುಪದ ಉನ್ಮತ್ತ ಸ್ಥಿತಿ, ಹಾಗೊಂದು ಕ್ರಿಯೆ ನಡೆದದ್ದೆ ಹೌದೋ ಅಲ್ಲವೋ ಎಂಬಂತೆ ಸುತ್ತಲಿನ ಗೋಡೆ ದೀಪಗಳು ಸುಮ್ಮನೆ ನಿಂತಿದ್ದವು, ಆದರೆ ಕನ್ನಡಿಯಲ್ಲಿ ಕಾಣುತ್ತಿದ್ದ ಕೆಂಪಾಗಿ ರಕ್ತ ಒಸರುವಂತಾದ ತುಟಿಗಳು ನಡೆದದ್ದಕ್ಕೆ ಸಾಕ್ಷಿ ಒದಗಿಸಿ ದಂತೆ ವಕ್ರವಾಗಿದ್ದವು, ಅದೆಂಥದ್ದೋ ಆಘಾತಕ್ಕೊಳಗಾದ ಮನಸ್ಸು ಅದೇ ಘಟನೆಯನ್ನು ನೆನೆಯುತ್ತಿತ್ತು, ಸೆಟ್ ವೆಟ್ ಹಚ್ಚಿ ಸ್ಪೈಕ್ ಮಾಡಿದ್ದ ಕೂದಲು ಚದುರಿತ್ತು, ಕನ್ನಡಿಯಲ್ಲಿ ನೋಡುತ್ತಾ ಸರಿಮಾಡಿಕೊಂಡೆ, ತುಟಿಯ ಗುರುತು ಅಳಿಸಲು ಇಷ್ಟವಿರಲಿಲ್ಲ, ಹಾಕಿದ್ದ ಕ್ಯಾಲ್ವಿನ್ ಕೈನ್ ಸುಗಂಧದ ಜತೆ ಮತ್ತಾವುದೋ ಹೂಗಳ ಸುಗಂಧ ಬೆರೆತಂತಿತ್ತು, ಇನ್ ಶರ್ಟ್ ಮಾಡಿ ಮತ್ತೊಮ್ಮೆ ಬೆರಳುಗಳಲ್ಲೆ ಸ್ಪೈಕ್ ಸರಿ ಮಾಡಿ ರೆಸ್ಟ್ ರೂಮಿನಿಂದ ಹೊರಬರುವಾಗ ಅರ್ಧ ಗಂಟೆ ನಿಮಿಷದಂತೆ ಕಳೆದಿತ್ತು, ಅವಳ ಕ್ಯಾಬಿನ್ನಿನತ್ತ ನೋಡಿದೆ, ಏನೂ ನಡೆದೇ ಇಲ್ಲದವಳಂತೆ ಸಲೀಸಾಗಿ ನಗುತ್ತಾ ಓಡಾಡುತ್ತಿದ್ದಳು, ಹೌದು, ಇನ್ನೆರಡೆ ದಿನ ತಾನು ಈ ಕಂಪನಿಯ ಅತಿಥಿ, ನನಗೆ ಒಂಥರದ ಖುಷಿ, ಅದರ ಜತೆ ಈಗ ಸಿಕ್ಕದ್ದು ಉಡುಗೊರೆಯೆ? ಜತೆಗೆ ಇದ್ದೆವಲ್ಲ ನಾಲ್ಕು ವರ್ಷ, ಬೇಕೆಂದದ್ದನ್ನ ಪಡೆಯದೆ ಬಿಡದ ತಾನು , ಅದೇ ಮನೋಭಾವದ ಅವಳು, ಈ ಕಂಪನಿಗೆ ಫ್ರೆಶರ್ ಆಗಿ ಸೇರಿದ್ದ ತನ್ನ  ಟೀಮಿಗಾಗಲೆ ಅವಳು ಮ್ಯಾನೇಜರ್, ಐದಡಿ ಏಳಿಂಚು, ಹೆಚ್ಚು ಕಮ್ಮಿ ಬೇರ್ ಆಗಿಯೆ ಇರುತ್ತಿದ್ದ ನೀಳ ಕಾಲುಗಳು ಮತ್ತದರ ಮೇಲಿನ ಚಿಟ್ಟೆ ಟಾಟೂ, ಬೇಡವೆಂದರೂ ಕಾಣುತ್ತಿದ್ದ ಕರ್ವ್ ದೇಹ, ದಪ್ಪ ಕೂಡ ಒಂಥರದ ಸೌಂದರ್ಯ ಅನಿಸೋಕೆ ಶುರುವಾದ್ದೆ ಅವಳನ್ನು ನೋಡಿದಾಗ, ಹತ್ತಿರ ಬಂದು "ಹಲೋ" ಅಂದಾಗ ತೇಲಿಬಂದ ಸುಗಂಧ ಅವಳ ಅಭಿರುಚಿಯನ್ನು ತಿಳಿಸಿತ್ತು, ತಾನು ಪೆಕರನಂತೆ ಬೆರಗಿನ ಕಣ್ಣುಬಿಟ್ಟು ಆಕೆಯನ್ನೆ ನೋಡುತ್ತ ನಿಂತು ಬಿಟ್ಟಿದ್ದೆ, ಆಕೆ ಮುಗುಳ್ನಕ್ಕು ಇದೆಲ್ಲ ನಾರ್ಮಲ್ ಅನ್ನೋ ಹಾಗೆ ಸರಿದು ಹೋಗಿದ್ದಳು , ನಂತರದ ದಿನಗಳಲ್ಲಿ ಅರಿವಾದದ್ದು, ಅವಳು ಬರೀ ಸುಂದರಿ ಅಷ್ಟೇ ಅಲ್ಲ ವಿಷ ತುಂಬಿದ ಹೆಣ್ಣು, ನನಗಂತು ಹತ್ತಲಾಗದ ಬೆಟ್ಟದಂತೆ, ಆದರೂ ಇದೇನು ದೊಡ್ಡದಲ್ಲ ಅನ್ನೋ ಲೆಕ್ಕದಲ್ಲಿ ನಾನು ಕೇರ್ ಲೆಸ್ ಆಗಿ ಇರಲಾಂಬಿಸಿದ್ದೆ, ಅವಳಿಗೂ ಗೊತ್ತಾಗಿತ್ತೇನೋ, ಕೆಲಸದಲ್ಲಿ ತಪ್ಪು ಹುಡುಕಲಾಗದೆ  ಸುಮ್ಮನಾಗಿದ್ದಳು, ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಬಂದು ತನ್ನ  ಕ್ಯಾಬಿನ್ನಿಗೆ ಎಳೆದೊಯ್ದುಕೂರಿಸಿ "ನೋಡೂ, ನೀನು ನನ್ನ ಕಾಲು ನೋಡೋದು, ಕತ್ತಿನ ಕೆಳಗೆ ಆಸೆಯಿಂದ ನೋಡೋದು ಎಲ್ಲ ಗೊತ್ತಾಗುತ್ತೆ,you know its so obvious in your age, you are bomman boy with a good family back ground, and more over that, I am six years older than you, so there is no intention to get involve with you physically, don't see like that, if I get mad your survival will be in question" ಸುಮ್ಮನೆ ತಲೆಯಾಡಿಸಿದ್ದೆ, ಆದರೆ ಕನಸಿನಲ್ಲಿ ಆ ಕಾಲ್ಗಳು ಮತ್ತು ಟಾಟು, ಕುತ್ತಿಗೆಯ ಚೂರು ಕೆಳಗೆ ಕಾಣುತ್ತಿದ್ದ ಪ್ಲಮೇರಿಯ ಟಾಟು ನನ್ನ  ಹುಚ್ಚಿಗೆಬ್ಬಿಸಿದ್ದವು,ಕೆಲಸದ ವಿಷಯದಲ್ಲಿ ಯಾವ ಭಿನ್ನಾಭಿಪ್ರಾಯ ಇರದಿದ್ದರೂ ಅವಳು ಮಾತ್ರ ಇದೆಲ್ಲದಕ್ಕಿಂತ ಮುಖ್ಯವಿಷಯವಾಗಿ ನನಗೆ ಕಾಡುತ್ತಿದ್ದಳು, ನನ್ನ ಕಣ್ಣಲ್ಲಿನ ಆರಾಧನೆ ಗೊತ್ತೆ ಆಗದವಳಂತೆ ನಿಭಾಯಿಸುತ್ತಿದ್ದ ಚತುರತೆ ಮತ್ತಷ್ಟು ಮೋಹ ಹುಟ್ಟಿಸುತ್ತಿತ್ತು‌.
ಬೇರೆ ಹುಡುಗಿಯರು ಮನಸ್ಸಿಗೆ ಹಿಡಿಸುತ್ತಿರಲಿಲ್ಲ ಅಂತ ಏನಲ್ಲ, ಅದೇನೋ ಸಿಗಲಾರದ್ದೆ ಜಾಸ್ತಿ ನೆನಪಾಗುವಂತೆ ಅವಳು, ಇಲ್ಲಿನ ಏಕತಾನತೆ, ಅವಳ ತೀವ್ರ ನಿರ್ಲಕ್ಷ್ಯ ನಾನು ಮತ್ತೊಂದು ಆಫರ್ ಅನ್ನು ಪರಿಗಣಿಸುವಂತೆ ಮಾಡಿತ್ತು, ದೊಡ್ಡ ಕಂಪನಿ, ಇಲ್ಲಿಯದಕ್ಕಿಂತ ಜಾಸ್ತಿಯೆ ಸ್ಯಾಲರಿ  ಅಪ್ಪ ಅಮ್ಮ ನೋಡಿದ ಹೆಣ್ಣನ್ನೆ ಮದುವೆಯಾದರೆ ಒಂಥರಕ್ಕೆ ಲೈಫು ಸೆಟಲ್, ಆ ನಿರ್ಧಾರದಲ್ಲೆ ಬಹಳ ನಿರಾಳ ಮನಸ್ಥಿತಿಯಲ್ಲಿಯೆ ಇವತ್ತು ಆಫೀಸು ತಲುಪಿ ವಿಷಯ ತಿಳಿಸಿದಾಗ ಇಡೀ ಟೀಮ್ ಅಭಿನಂದಿಸಿತ್ತು, ಅದೇ ಗುಂಗಿನಲ್ಲಿ ರೆಸ್ಟ್ ರೂಮಿನೆಡೆಗೆ ನಡೆದಿದ್ದೆ, ಅಲ್ಲೆ ಅವಳು ಅದೇ ತಿರುವಿನಲ್ಲಿ ಬೇಟೆಗಾಗಿ ಕಾದವಳಂತೆ ಒಮ್ಮೆಲೆ ಹಿಂದಿನಿಂದ ಅಪ್ಪಿದ್ದಳು, ಅದನ್ನು ನಂಬಲಾಗದ ಮನಸ್ಥಿತಿಯಲ್ಲಿದ್ದ  ನನ್ನ ಐದು ನಿಮಿಷ ಬಿಟ್ಟೂ ಬಿಡದಂತೆ ತೀವ್ರವಾಗಿ ಚುಂಬಿಸಿ ಮರೆಯಾಗಿದ್ದಳು, ಇದು ಏನಂತಲೆ ಅರ್ಥವಾಗಿರಲಿಲ್ಲ ನನಗೆ, ಅವಳಿಗೆ ನನ್ನ ಮೇಲೆ ಪ್ರೀತಿಯಾ, ಅಥವಾ ಹೋಗುತ್ತಿದ್ದೀನಿ ಅನ್ನೋ ದುಃಖವಾ, ಏನಂತ ಗೊತ್ತಾಗದೆ ಗೊಂದಲಕ್ಕೆ ಬಿದ್ದಿದ್ದ ನನಗುಳಿದ ಎರಡು ದಿನ ಸರಿದದ್ದೆ ಗೊತ್ತಾಗಲಿಲ್ಲ.
ಹೊಸಾ ಆಫೀಸಿನ ಮೊದಲ ದಿನ, ದೊಡ್ಡದಾದ ಸ್ಪೇಸ್, ನನಗೊಂದು ಸಪರೇಟ್ ಕ್ಯಾಬಿನ್  ಜೀವನ ಸಾರ್ಥಕವಾದಂತನ್ನಿಸಿತು ,ನಾನೀಗ ಕ್ಲೈಂಟ್ ಮ್ಯಾನೇಜ್ಮೆಂಟ್ ಹೆಡ್, ಹ್ಮ್, ಹೂಗುಚ್ಚವೊಂದು ನನ್ನ ಕ್ಯಾಬಿನ್ನಿನಲ್ಲಿ ನನಗಾಗಿ ಕಾಣುತ್ತಿತ್ತು, ಮತ್ತು ಅದನ್ನ ಹಿಡಿದು ಕಾಯುತ್ತಿದ್ದ ಅವಳು?

Wednesday, June 29, 2016

ಅವಳೆಂಬ ಮಾಯೆ

"ಬೀಪ್" ಮೆಸೇಜ್ ಬಂದ ಸದ್ದು, ಹ್ಮ್ ಇವತ್ತು ಎಂಟನೆಯ ತಾರೀಖು, ಮನೆಗೆ ಮಾಡಿದ ಸಾಲ ಬ್ಯಾಂಕ್ ಸೇರಿದ್ದು, ಇದೊಂದಾದರೆ ಕೈಯಲ್ಲಿ ಬರೋಬ್ಬರಿ ಐವತ್ತು ಸಾವಿರ ಉಳಿತಾಯ, ವೀಕೆಂಡು ಅದೂ ಇದೂ ಶಾಪಿಂಗ್ ಮಾಡಿದರೂ ಹತ್ತು ಸಾವಿರ ಖರ್ಚಾಗಲಿಕ್ಕಿಲ್ಲ, ಮನೆಯ ಖರ್ಚೆಲ್ಲ ಅವಳ ಸಂಪಾದನೆಯಲ್ಲಿ, ತನಗೇನೂ ಭಾರೀ ಆಸೆಯಿಲ್ಲ, ಅವಳಿಗೆ ಊರು ಸುತ್ತುವ ಆಸೆ ಅದೂ ಐಷಾರಾಮಿಯಾಗಿ, ಅದಕ್ಕಾಗಿ ಉಳಿಸುತ್ತಾಳೆ,

"ನೀನೂ ಉಳಿಸು, ಉಳಿಸುವ ಹೆಂಡತಿ ಉಳಿಸುವ ಮಕ್ಕಳು ಮತ್ತು ಉಳಿಸುವ ನೀನು, ಸುಂದರ ಸುಖೀ ಸಂಸಾರ, ವಾರಕ್ಕೊಮ್ಮೆ ಸಿನೆಮಾ, ಶಾಪಿಂಗು ಇಲ್ಲ ಹತ್ತಿರದಲ್ಲಿರುವ ಯಾವುದೋ ದೇವಸ್ಥಾನ, ಪಾರ್ಕ್, ವರ್ಷಕ್ಕೊಮ್ಮೆ ವಿದೇಶ, ಬೀರುವಿನಲ್ಲಿ ಇಡಲು ಆಭರಣಗಳು ಮತ್ತು ಕಾಣೆಯಾದ ನೆಮ್ಮದಿ" ಅವಳ ಖಿಲ ಖಿಲ ನಗು ಎದೆಯಲ್ಲಿ ಚುಚ್ಚಿ  ತಲೆಯಲ್ಲೊಮ್ಮೆ ಕೈಯಾಡಿಸಿಕೊಂಡೆ,ಅವಳ ನೆನಪಾದಾಗೆಲ್ಲ ಒಂಥರದ ಸೆಳಕು ಎದೆಯಲ್ಲಿ, ಆ ಸೆಳೆತ, ಆ ಮಾದಕ ನೋಟ, ಅಬ್ಬ ಗಟ್ಟಿ ಗುಂಡಿಗೆಯ ಹೆಣ್ಣು, ಅವಳು ಇಷ್ಟಪಟ್ಟಿದ್ದಳು, ನಾನೂ, ಮದುವೆಯಾಗುವಾ ಅಂದೆ, ಮದುವೆಯಾದರೆ? ಅಂತ ಮರುಪ್ರಶ್ನೆ, ಅದಕ್ಕೆ ತಾನೇ ನಾಚಿ ತಲೆ ತಗ್ಗಿಸಿದ್ದೆ, ಅರ್ದ ಗಂಟೆ ಜೋರಾಗಿ ನಕ್ಕು ನಂತರ "ನೀನು ಒಳ್ಳೆಯ ಹುಡುಗ, ನಿನಗೆ ಒಳ್ಳೆಯ ಹುಡುಗಿ ಸಿಗಲಿ"
ತನ್ನದು ಅವಳೇ ಬೇಕೆಂಬ ಹಟ, ತೋರುಬೆರಳಲ್ಲಿ ಕ್ಷಿತಿಜಕ್ಕೆ ಕೈ ಮಾಡಿ ತೋರಿದ್ದಳು, ನೋಡು, ನಾನು ಹೇಗಿದ್ದೀನಿ ಹಾಗೆ ಒಪ್ಪತೀಯಾ? ನಿಮ್ಮ ಸಮಾಜ ನನ್ನ ಒಪ್ಪುತ್ತದಾ? ಅಪ್ಪ ಅಮ್ಮ? ನಾನು ಸ್ವತಂತ್ರ ಬದುಕಿದವಳು, ಆ ಖುಷಿಯನ್ನ ಕಳೆಯದೆ ನಾನು ನಿನ್ನ ಹೆಂಡತಿಯಾಗಿ ಇರಬಹುದಾ? ಯೋಚಿಸು, ಇದು ನಿನ್ನ ನಿರ್ಧಾರ, ಅಷ್ಟಕ್ಕು ಈ ಸಂಬಂಧಕ್ಕೆ ಮದುವೆಯೆ ಕೊನೆ ಅಂತ ಏನಿದೆ? ಸ್ನೇಹ ಪ್ರೀತಿ ಇವೆಲ್ಲ ತೀವ್ರ ಭಾವನೆಗಳು, ಕೊಚ್ಚಿಹೋಗಬೇಡ, "  ಆಕೆಯ ಪ್ರಾಮಾಣಿಕತೆ ದಿಗಿಲು ಹುಟ್ಟಿಸುತ್ತಿತ್ತು,ಅವಳ ಸ್ನೇಹಿತರು , ಸ್ವಚ್ಛಂದ ಹಕ್ಕಿಯಂತೆ ಸದಾ ಲವಲವಿಕೆಯ ಮನಸ್ಸು , ಸುತ್ತ ಇರುತ್ತಲಿದ್ದ ಹುಡುಗರ ಹಿಂಡು ಅವರ ಆರಾಧನೆಯ ನೋಟಗಳು,
ತಾನು ದೂರಾಗುವ ಮುಂಚೆ ಇರಬೇಕು, ಮನೆಗೊಂದು ಹುಡುಗರು ಓಡಿಸುವ ದೊಡ್ಡ ಬೈಕು ತಂದಿದ್ದಳು, ನಾಲ್ಕೆ ದಿನದಲ್ಲಿ ಕಲಿತು ಅದೆಲ್ಲಿಗೋ ಟ್ರಿಪ್ ಹೋಗಿ ಬಂದವಳ ಜತೆ ಅದಾವುದೋ ಹುಡುಗನನ್ನು ಕರೆ ತಂದಿದ್ದಳು, ಅವನ ಜತೆ ಮದುವೆಯಾಗುವುದಿಲ್ಲ   ಆದರೆ ಅವನು ತನ್ನ ಬಿಸಿನೆಸ್ ಗೆ ಹೆಲ್ಪ್ ಮಾಡುತ್ತಾನೆಂದು ಹೇಳಿದ್ದಳಲ್ಲ, ತನಗೆ ಇದ್ದ ಒಂದು ನಿರೀಕ್ಷೆ ಕಳಚಿಕೊಂಡಿತ್ತು, ಹೋಗುತ್ತೇನೆ ಅಂದಾಗ ಆಕೆ ಹೇಳಿದ್ದು ಈಗಲು ಕಿವಿಯಲ್ಲಿಯೆ ಇದೆ" ಹೋಗ್ತೀನಿ ಅನ್ಬೇಡ, ಹಾಗೆ ಹೋಗೋದು ಬರೋದು ಇರೋದೆಲ್ಲ ಸಾಂಕೇತಿಕ ಮಾತ್ರ, ಅಲ್ಲ ಮಾರಾಯ ಭೂಮಿ ಗುಂಡಗಿದೆ ಅಂತ ಕೇಳಿಲ್ವಾ, ಜತೆಗೆ ಇರ್ತೀನಿ ಹೋಗು" ಅವಳ ಆತ್ಮವಿಶ್ವಾಸ , ಹೆಗಲ ಮೇಲೆ ಕೈ ಹಾಕಿ ಸಮಾಧಾನಿಸಿದ ಕ್ಷಣಗಳನ್ನೆಲ್ಲ ಹೊತ್ತು ಬದುಕು ಶುರು ಮಾಡಿದ್ದೆ,
ಅದೇ ಹೆಂಡತಿ ಮಕ್ಕಳು, ಹಾಹಾ ನಗು ಬಂತು, ಮೊನ್ನೆ ಟೀವಿಯಲ್ಲಿ ಅವಳನ್ನು ನೋಡಿದಾಗ ನಂಬಿಕೆಯೆ ಬರಲಿಲ್ಲ ಹಾಗೆಯೆ ಇದ್ದಳು, ಮುಖದ ಮೇಲಿನ ಮುಗುಳ್ನಗು,ಅದೇ ಪ್ರಭಾವಲಯ ಅದೇ ಮಾದಕತೆ, ಮತ್ತಷ್ಟು ದೃಢ ಧ್ವನಿ, ಬೆಟ್ಟ ಹತ್ತುವ ತರಬೇತಿಯನ್ನು ಕಲಿಸುತ್ತಿದ್ದಳು, ಅವಳನ್ನೊಮ್ಮೆ ಭೇಟಿಯಾಗಲೆ ಅಂದುಕೊಂಡವನು ಮತ್ತೆ ಸುಮ್ಮನಾದೆ, ಹೌದು ಅವಳು ಎಲ್ಲರಂತಲ್ಲ ಅಥವಾ ನಾನು ಸಾಮಾನ್ಯ, ಅತೀ ಸಾಮಾನ್ಯ, ಭೆಟ್ಟಿಯಿಂದ ಬದುಕು ಬಹಳ ಬದಲೇನೂ ಆಗಲಾರದು ಅನ್ನಿಸತೊಡಗಿತು, ಬ್ಯಾಂಕಿನಿಂದ ಬಂದ ಮೆಸೇಜು ನೋಡಿ ಉಳಿದ ಹಣದಲ್ಲಿ ಮಗದೊಂದು ಸೈಟು ನೋಡಲು ನಮ್ಮ ರಿಯಲ್ ಎಸ್ಟೇಟ್ ಏಜೆಂಟನಿಗೆ ಫೋನಾಯಿಸಿದೆ.ಅವನು ಅದಾವುದೋ ವೆಬ್ ಸೈಟಿನಲ್ಲಿ ನೋಂದಾಯಿಸಿದ್ದೇನೆ ಎಂದೂ, ಮೆಸೇಜಿನಲ್ಲಿಯೆ ಎಲ್ಲ ವಿವರಗಳು ಬರುತ್ತದೆಂದು ಹೇಳಿದ,  ಅವಳು ನಿಧಾನಕ್ಕೆ ಬರಲು ಶುರುವಾದ ಮೆಸೇಜ್ ಗಳ ಬೀಪ್ ಸದ್ದಿನಲ್ಲಿ ಮರೆಯಾದಳು.